ದೇಶ

ದೆಹಲಿ ಅಬಕಾರಿ ನೀತಿ ಪ್ರಕರಣ: ಎಎಪಿಯ ಸಂಜಯ್​ ಸಿಂಗ್​ಗೆ ಅ. 27ರವರೆಗೆ ನ್ಯಾಯಾಂಗ ಬಂಧನ

Ramyashree GN

ನವದೆಹಲಿ: ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದಂತೆ ಇ.ಡಿ ತನಿಖೆ ನಡೆಸುತ್ತಿರುವ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ಶುಕ್ರವಾರ ಆಮ್ ಆದ್ಮಿ ಪಕ್ಷದ (ಎಎಪಿ) ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.

ಮೂರು ದಿನಗಳ ಇ.ಡಿ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಅವರನ್ನು ರೋಸ್ ಅವೆನ್ಯೂ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಎಂಕೆ ನಾಗ್ಪಾಲ್ ಅವರ ಮುಂದೆ ಹಾಜರುಪಡಿಸಲಾಯಿತು.

ತನ್ನ ಬಂಧನ ಮತ್ತು ಕಸ್ಟಡಿಯನ್ನು ಪ್ರಶ್ನಿಸಿ ಸಂಜಯ್ ಸಿಂಗ್ ಶುಕ್ರವಾರ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಜಾರಿ ನಿರ್ದೇಶನಾಲಯವು (ಇ.ಡಿ) ತನ್ನ ಬಂಧನಕ್ಕೆ ಸರಿಯಾದ ಆಧಾರಗಳನ್ನು ಒದಗಿಸಿಲ್ಲ ಎಂದು ಸಿಂಗ್ ತಮ್ಮ ಬಂಧನವನ್ನು ಪ್ರಶ್ನಿಸಿದ್ದಾರೆ.

ವಾದವನ್ನು ಆಲಿಸಿದ ನಂತರ ನ್ಯಾಯಾಧೀಶರು, ಸಂಜಯ್ ಸಿಂಗ್ ಅವರನ್ನು ಅಕ್ಟೋಬರ್ 27 ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ. ವಿವರವಾದ ಆದೇಶದ ಪ್ರತಿಯನ್ನು ನಿರೀಕ್ಷಿಸಲಾಗಿದೆ. 

ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಂಜೀವ್ ನರುಲಾ ಅವರ ವಿಭಾಗೀಯ ಪೀಠದ ಮುಂದೆ ಸಂಜಯ್ ಸಿಂಗ್ ಅವರ ವಕೀಲರು ತುರ್ತು ವಿಚಾರಣೆಗಾಗಿ ಮನವಿ ಮಾಡಿದ ನಂತರ ಶುಕ್ರವಾರವೇ ಸಿಂಗ್ ಅವರ ಮನವಿಯನ್ನು ಆಲಿಸಲು ಹೈಕೋರ್ಟ್ ಸಮ್ಮತಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಗೌಪ್ಯ ದಾಖಲೆಗಳನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ್ಕೆ ಸಂಬಂಧಿಸಿದಂತೆ ಅವರ ನಡವಳಿಕೆಯು ಸಂಪೂರ್ಣ ಅಸಹಕಾರದಿಂದ ಕೂಡಿದೆ ಎಂಬ ಕಾರಣಕ್ಕಾಗಿ ಇ.ಡಿ ಮಂಗಳವಾರ ಸಿಂಗ್ ಅವರನ್ನು ಕಸ್ಟಡಿಗೆ ನೀಡಬೇಕು ಎಂದು ನ್ಯಾಯಾಧೀಶ ನಾಗ್ಪಾಲ್ ಅವರ ಪೀಠದ ಮುಂದೆ ಕೋರಿತ್ತು.

ಜಾರಿ ನಿರ್ದೇಶನಾಲಯವು ಅಕ್ಟೋಬರ್ 4 ರಂದು ನಾರ್ತ್ ಅವೆನ್ಯೂ ಪ್ರದೇಶದಲ್ಲಿನ ಅವರ ನಿವಾಸದಲ್ಲಿ ಶೋಧ ನಡೆಸಿದ ನಂತರ ಸಿಂಗ್ ಅವರನ್ನು ಬಂಧಿಸಿತು. ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ಸೆಕ್ಷನ್‌ಗಳ ಅಡಿಯಲ್ಲಿ ಸಿಂಗ್ ಅವರನ್ನು ಬಂಧಿಸಲಾಗಿದೆ.

SCROLL FOR NEXT