ನವದೆಹಲಿ: ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ 23 ವರ್ಷದ ಯುವತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣದಲ್ಲಿ ಕೆ ಚಂದ್ರಶೇಖರ್ ರಾವ್ ನೇತೃತ್ವದ ಬಿಆರ್‌ಎಸ್ ಸರ್ಕಾರವನ್ನು ಕಾಂಗ್ರೆಸ್ ಶನಿವಾರ ತರಾಟೆಗೆ ತೆಗೆದುಕೊಂಡಿದ್ದು, ಇದು ಆತ್ಮಹತ್ಯೆಯಲ್ಲ, ಯುವಕರ ಕನಸು ಮತ್ತು ಆಕಾಂಕ್ಷೆಗಳ ಕೊಲೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಕಳೆದ 10 ವರ್ಷಗಳಲ್ಲಿ, 'ಬಿಜೆಪಿ ರಿಷ್ತೇದಾರ್ ಸಮಿತಿ ಬಿಆರ್‌ಎಸ್ ಮತ್ತು ಬಿಜೆಪಿ ಒಟ್ಟಾಗಿ ತಮ್ಮ ಅದಕ್ಷತೆಯಿಂದ ರಾಜ್ಯವನ್ನು ಹಾಳುಮಾಡಿದೆ ಎಂದು ಆರೋಪಿಸಿದರು.
ತೆಲಂಗಾಣದಲ್ಲಿ ಅಧಿಕಾರಕ್ಕೆ ಬಂದರೆ ಕಾಂಗ್ರೆಸ್ ಸರ್ಕಾರವು ಉದ್ಯೋಗ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡುತ್ತದೆ. 1 ತಿಂಗಳಲ್ಲಿ ಯುಪಿಎಸ್‌ಸಿ ಮಾದರಿಯಲ್ಲಿ ಟಿಎಸ್‌ಪಿಎಸ್‌ಸಿ (ತೆಲಂಗಾಣ ರಾಜ್ಯ ಲೋಕಸೇವಾ ಆಯೋಗ) ಅನ್ನು ಮರುಸಂಘಟಿಸುತ್ತದೆ ಮತ್ತು ಒಂದು ವರ್ಷದೊಳಗೆ 2 ಲಕ್ಷ ಖಾಲಿ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುತ್ತದೆ. ಇದುವೇ ಗ್ಯಾರಂಟಿ ಎಂದು ಅವರು ಹೇಳಿದರು.
ಟಿಎಸ್‌ಪಿಎಸ್‌ಸಿ ಪರೀಕ್ಷೆಯ ಅಧಿಸೂಚನೆಯನ್ನು ಮುಂದೂಡಿದ್ದರಿಂದ ಮನನೊಂದು 23 ವರ್ಷದ ಪರೀಕ್ಷಾ ಆಕಾಂಕ್ಷಿಯೊಬ್ಬರು ಹೈದರಾಬಾದ್‌ನ ಅಶೋಕ್ ನಗರದಲ್ಲಿನ ಹಾಸ್ಟೆಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದ್ದು, ಬಿಆರ್‌ಎಸ್ ವಿರುದ್ಧ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳು ಪ್ರತಿಭಟನೆ ನಡೆಸಿದರು.
ಶುಕ್ರವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಹೊರಬಿದ್ದ ತಕ್ಷಣ, ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಆ ಪ್ರದೇಶದಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದರು ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆತ್ಮಹತ್ಯೆಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.
ಟ್ವಿಟರ್‌ನಲ್ಲಿ ಹಿಂದಿಯಲ್ಲಿ ಪೋಸ್ಟ್ ಮಾಡಿದ ರಾಹುಲ್ ಗಾಂಧಿ, ಹೈದರಾಬಾದ್‌ನಲ್ಲಿ ವಿದ್ಯಾರ್ಥಿನಿಯ ಆತ್ಮಹತ್ಯೆಯ ಸುದ್ದಿ ಅತ್ಯಂತ ದುಃಖಕರವಾಗಿದೆ. ಇದು ಆತ್ಮಹತ್ಯೆಯಲ್ಲ, ಇದು ಯುವಕರ ಕನಸುಗಳು, ಭರವಸೆಗಳು ಮತ್ತು ಆಕಾಂಕ್ಷೆಗಳ ಕೊಲೆಯಾಗಿದೆ. ಇಂದು ತೆಲಂಗಾಣದ ಯುವಕರು ನಿರುದ್ಯೋಗದಿಂದ ಸಂಪೂರ್ಣ ನಾಶವಾಗಿದ್ದಾರೆ ಎಂದು ಹೇಳಿದರು.
ವಶಪಡಿಸಿಕೊಂಡ ಡೆತ್ ನೋಟ್‌ನಲ್ಲಿ 'ಕುಟುಂಬ ಸದಸ್ಯರಲ್ಲಿ ನಾನು ಕ್ಷಮೆ ಕೇಳುತ್ತೇನೆ. ನಿಮಗಾಗಿ ನನ್ನಿಂದ ಏನನ್ನೂ ಮಾಡಲು ಸಾಧ್ಯವಾಗಿಲ್ಲ' ಎಂದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿಗಾರರಿಗೆ ತಿಳಿಸಿದರು.