ದೇಶ

ಇಸ್ರೇಲ್ ಪ್ರಧಾನಿ ನೇತನ್ಯಾಹು 'ದೆವ್ವ-ಕ್ರೂರಿ': ಭಾರತ ಪ್ಯಾಲೆಸ್ತೀನ್ ಪರ ನಿಲ್ಲಬೇಕು; ಪ್ರಧಾನಿ ಮೋದಿಗೆ ಓವೈಸಿ ಆಗ್ರಹ

Shilpa D

ಹೈದರಾಬಾದ್‌: ಇಸ್ರೇಲ್ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಅವರನ್ನು ‘ದೆವ್ವ’ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಜರಿದಿದ್ದಾರೆ. ಅಷ್ಟೇ ಅಲ್ಲ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಬೆಂಬಲವನ್ನು ಗಾಜಾಪಟ್ಟಿ ಜನತೆಗೆ ನೀಡಬೇಕು ಎಂದು ಓವೈಸಿ ಆಗ್ರಹಿಸಿದ್ದಾರೆ.

ಪ್ಯಾಲೆಸ್ತೀನ್‌ ಕೇವಲ ಮುಸ್ಲಿಮರ ವಿಷಯವಾಗಿಲ್ಲ, ಮಾನವೀಯ ಸಮಸ್ಯೆಯಾಗಿದೆ, ಕೂಡಲೇ ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ಜನರಿಗೆ ಸಹಾಯ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.  ಪ್ಯಾಲೆಸ್ತೀನ್‌ನಲ್ಲಿ ಸುಮಾರ ಹತ್ತು ಲಕ್ಷ ಜನರು ಸೂರು ಕಳೆದುಕೊಂಡು ಅಲೆದಾಡುತ್ತಿದ್ದಾರೆ, ಸಾವಿರಾರು ಜನರು ಗಾಯಾಳುಗಳಾಗಿದ್ದಾರೆ ಅವರಿಗೆ ಮೋದಿ ಸ್ಪಂದಿಸಬೇಕು ಎಂದರು.

ಇದೇ ವೇಳೆ ಇಸ್ರೇಲ್ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಅವರು ನಿರಂಕುಶಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಅವರು ದೆವ್ವದಂತೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಓವೈಸಿ, ಇಸ್ರೇಲ್ ದೇಶದಿಂದ ಪ್ಯಾಲಿಸ್ತೀನ್ ಮೇಲೆ ಯುದ್ಧಾಪರಾಧ ಆಗುತ್ತಿದೆ ಎಂದು ಕಿಡಿ ಕಾರಿದ್ಧಾರೆ.

ಪ್ಯಾಲೆಸ್ತೀನ್‌ ಬೆಂಬಲಿಸುವವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್‌ ಹೇಳಿಕೆ ಬಗ್ಗೆ ಓವೈಸಿ ಕಿಡಿಕಾರಿದರು. ಮುಖ್ಯಮಂತ್ರಿಗಳೇ, ನಾನು ಹೆಮ್ಮೆಯಿಂದ ಪ್ಯಾಲೆಸ್ಟೀನ್‌ ಮತ್ತು ನಮ್ಮ ತ್ರಿವರ್ಣ ಧ್ವಜವನ್ನು ಧರಿಸುತ್ತಿದ್ದೇನೆ. ನಾನು ಅಲ್ಲಿನ ಜನರ ಪರವಾಗಿ ನಿಲ್ಲುತ್ತೇನೆ, ನೀವು ಎಷ್ಟು ಪ್ರಕರಣಗಳನ್ನು ಬೇಕಾದರೂ ದಾಖಲಿಸಬಹುದು ಎಂದರು ಎಂದು ಅವರು ಹೇಳಿದರು.

ಗಾಜಾಪಟ್ಟಿಯಲ್ಲಿ ಸುಮಾರು 10 ಲಕ್ಷ ಮಂದಿ ನಿರಾಶ್ರಿತರಾಗಿದ್ದಾರೆ. ಆದರೆ, ಇಡೀ ವಿಶ್ವ ಈ ವಿಚಾರದಲ್ಲಿ ಮೌನ ವಹಿಸಿದೆ. ಇಸ್ರೇಲ್ ವಿರುದ್ಧ ದಾಳಿ ನಡೆಸಿದ್ದು ಯಾರು? ಇಸ್ರೇಲ್ ಜನರನ್ನು ಕೊಂದವರು ಯಾರು? ಆದರೆ, ಗಾಜಾಪಟ್ಟಿಯ ಬಡ ಜನತೆ ಏನು ತಪ್ಪು ಮಾಡಿದ್ದರು? ಅವರಿಗೆ ಏಕೆ ಈ ಶಿಕ್ಷೆ? ಎಂದು ಅಸಾದುದ್ದೀನ್ ಓವೈಸಿ ಪ್ರಶ್ನಿಸಿದ್ದಾರೆ. ಇನ್ನು ಮಾಧ್ಯಮಗಳೂ ಕೂಡಾ ಏಕಪಕ್ಷೀಯವಾಗಿ ವರದಿ ಮಾಡುತ್ತಿದೆ. ಕಳೆದ 70 ವರ್ಷಗಳಿಂದ ಇಸ್ರೇಲ್ ಆಕ್ರಮಣಕಾರಿ ನೀತಿ ಅನುಸರಿಸುತ್ತಿದೆ. ನಿಮಗೆ ಈ ಒತ್ತುವರಿ ಕಾಣೋದಿಲ್ಲವೇ? ನಿಮಗೆ ಈ ದೌರ್ಜನ್ಯ ಕಾಣೋದಿಲ್ಲವೇ? ಎಂದು ಓವೈಸಿ ಸವಾಲೆಸೆದಿದ್ದಾರೆ.

SCROLL FOR NEXT