ದೇಶ

ಎಎಪಿ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾಗೆ ಬಿಗ್ ರಿಲೀಫ್; ವಿಚಾರಣಾ ನ್ಯಾಯಾಲಯದ ಆದೇಶಕ್ಕೆ ದೆಹಲಿ ಹೈಕೋರ್ಟ್ ತಡೆ

Ramyashree GN

ನವದೆಹಲಿ: ತಮಗೆ ನೀಡಿರುವ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡುವುದನ್ನು ತಡೆಯುವ ಮಧ್ಯಂತರ ತಡೆ ಆದೇಶವನ್ನು ಹಿಂಪಡೆದ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಎಎಪಿ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಪುರಸ್ಕರಿಸಿದೆ. 

ದೆಹಲಿ ಹೈಕೋರ್ಟ್ ಇಂದು ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದ್ದು, ಎಎಪಿ ಸಂಸದ ರಾಘವ್ ಚಡ್ಡಾ ಅವರು ಸರ್ಕಾರಿ ಬಂಗಲೆಯನ್ನು ಖಾಲಿ ಮಾಡುವ ಅಗತ್ಯ ಸದ್ಯಕ್ಕಿಲ್ಲದಂತಾಗಿದ್ದು, ರಿಲೀಫ್ ಸಿಕ್ಕಿದೆ.

ಚಡ್ಡಾ ಅವರನ್ನು ಸರ್ಕಾರಿ ಬಂಗಲೆಯಿಂದ ತೆರವುಗೊಳಿಸದಂತೆ ರಾಜ್ಯಸಭಾ ಸಚಿವಾಲಯಕ್ಕೆ ನಿರ್ದೇಶನ ನೀಡಿದ್ದ ವಿಚಾರಣಾ ನ್ಯಾಯಾಲಯದ ಏಪ್ರಿಲ್ 18 ರ ಆದೇಶವು ಪುನಶ್ಚೇತನಗೊಂಡಿದೆ ಎಂದು ನ್ಯಾಯಮೂರ್ತಿ ಅನುಪ್ ಜೈರಾಮ್ ಭಂಭಾನಿ ಹೇಳಿದರು.

ರಾಘವ್ ಚಡ್ಡಾ ಅವರು ತಮ್ಮ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಿಸದಂತೆ ರಾಜ್ಯಸಭಾ ಸಚಿವಾಲಯಕ್ಕೆ ಸೂಚಿಸಿದ್ದ ಮಧ್ಯಂತರ ಆದೇಶವನ್ನು ವಿಚಾರಣಾ ನ್ಯಾಯಾಲಯವು ಹಿಂಪಡೆದಿತ್ತು. ಏಪ್ರಿಲ್‌ನಲ್ಲಿ ನೀಡಲಾಗಿದ್ದ ಮಧ್ಯಂತರ ತಡೆಯನ್ನು ಹಿಂಪಡೆದಿದ್ದ ಅಕ್ಟೋಬರ್ 5ರ ಆದೇಶವನ್ನು ಪ್ರಶ್ನಿಸಿ ಚಡ್ಡಾ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. 

ನ್ಯಾಯಾಲಯವು ತನ್ನ ಇತ್ತೀಚಿನ ತೀರ್ಪಿನಲ್ಲಿ, ರಾಘವ್ ಚಡ್ಡಾ ಅವರು ರಾಜ್ಯಸಭಾ ಸಂಸದರಾಗಿ ಅಧಿಕಾರಾವಧಿ ಪೂರ್ಣಗೊಳ್ಳುವವರೆಗೆ ಸರ್ಕಾರಿ ಬಂಗಲೆಯನ್ನು ಆಕ್ರಮಿಸಿಕೊಳ್ಳುವ ಬೇಷರತ್ತಾದ ಹಕ್ಕನ್ನು ಹೊಂದಿರಲು ಸಾಧ್ಯವಿಲ್ಲ. ಹಂಚಿಕೆಯನ್ನು ರದ್ದುಪಡಿಸಿದ ನಂತರ ಅವರು ಬಂಗಲೆಯಲ್ಲಿ ಉಳಿಯಲು ಅರ್ಹರಾಗಿರುವುದಿಲ್ಲ ಎಂದಿತ್ತು. 

ಸಂಸದರಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ಉಚ್ಚಾಟನೆ ಪ್ರಕ್ರಿಯೆ ನಡೆಯುತ್ತಿದೆ ಎಂದು ಚಡ್ಡಾ ಪರ ವಕೀಲರು ಹೈಕೋರ್ಟ್‌ಗೆ ಸಲ್ಲಿಸಿದರು.

ವಿಚಾರಣಾ ನ್ಯಾಯಾಲಯದ ತೀರ್ಪಿನ ವಿರುದ್ಧದ ರಾಘವ್ ಚಡ್ಡಾ ಅವರ ಅರ್ಜಿಯನ್ನು ರಾಜ್ಯಸಭಾ ಕಾರ್ಯದರ್ಶಿ ವಿರೋಧಿಸಿದ್ದರು.

SCROLL FOR NEXT