ದೇಶ

ಅಯೋಧ್ಯೆ: ಹನುಮಾನ್ ಗರ್ಹಿ ದೇಗುಲದ ಸಂಕೀರ್ಣದಲ್ಲಿನ ಆಶ್ರಮದಲ್ಲಿ ನಾಗಾ ಸಾಧುವಿಗೆ ಇರಿದು ಹತ್ಯೆ

Ramyashree GN

ಅಯೋಧ್ಯೆ: ಅಯೋಧ್ಯೆ ಜಿಲ್ಲೆಯ ರಾಮಜನ್ಮಭೂಮಿ ಪೊಲೀಸ್ ಠಾಣೆ ವ್ಯಾಪ್ತಿಯ ಹನುಮಾನ್ ಗರ್ಹಿ ದೇವಸ್ಥಾನದ ಸಂಕೀರ್ಣದಲ್ಲಿರುವ ಆಶ್ರಮದಲ್ಲಿ ನಾಗಾ ಸಾಧುವೊಬ್ಬರನ್ನು ಗುರುವಾರ ಇರಿದು ಹತ್ಯೆ ಮಾಡಲಾಗಿದೆ.

ಪೊಲೀಸರ ಪ್ರಕಾರ, ಅವರ ಕುತ್ತಿಗೆ, ಎದೆ ಮತ್ತು ಬೆನ್ನಿನ ಮೇಲೆ ಹರಿತವಾದ ಆಯುಧಗಳಿಂದ ಉಂಟಾದ ಗಾಯದ ಗುರುತುಗಳು ಕಂಡುಬಂದಿವೆ. ಮೊದಲು ತೆಳುವಾದ ತಂತಿಯಿಂದ ಕತ್ತು ಹಿಸುಕಿ ನಂತರ, ಚಾಕುವಿನಿಂದ ಇರಿದಿರುವ ಶಂಕೆಯೂ ವ್ಯಕ್ತವಾಗಿದೆ.

ಎಸ್‌ಎಸ್‌ಪಿ ರಾಜ್‌ಕರಣ್ ನಾಯರ್, ನಗರದ ಎಸ್‌ಪಿ ಮಧುಬನ್ ಸಿಂಗ್, ಬಿಕಾಪುರ್ ಸಿಒ ಡಾ.ರಾಜೇಶ್ ತಿವಾರಿ ನೇತೃತ್ವದ ವಿಧಿವಿಜ್ಞಾನ ತಂಡವು ಘಟನಾ ಸ್ಥಳಕ್ಕೆ ಧಾವಿಸಿ ಹತ್ಯೆಯ ಬಗ್ಗೆ ಮಾಹಿತಿ ಪಡೆದು ತನಿಖೆ ಆರಂಭಿಸಿದೆ.

ಮೃತ ಸಾಧುವನ್ನು ದುರ್ಬಲ್ ದಾಸ್ (44) ಎಂದು ಗುರುತಿಸಲಾಗಿದ್ದು, ಬಸಂತಿಯಾ ಪಟ್ಟಿಯೊಂದಿಗೆ ಸಂಬಂಧ ಹೊಂದಿದ್ದ ರಾಮ್ ಸಹರೆ ದಾಸ್ ಅವರ ಶಿಷ್ಯ ಎನ್ನಲಾಗಿದೆ.

ವರದಿಗಳ ಪ್ರಕಾರ, ದುರ್ಬಲ್ ದಾಸ್ ಆಶ್ರಮದ ಒಳಭಾಗದ ಮೂರನೇ ಕೋಣೆಯಲ್ಲಿ ವಾಸಿಸುತ್ತಿದ್ದರು. ಇಬ್ಬರು ಶಿಷ್ಯರು ಸಹ ಅವರೊಂದಿಗೆ ವಾಸಿಸುತ್ತಿದ್ದರು.

ಘಟನೆ ನಂತರ, ರಿಷಬ್ ಶುಕ್ಲಾ ಎಂಬ ಶಿಷ್ಯ ಸ್ಥಳದಿಂದ ಪರಾರಿಯಾಗಿದ್ದು, ಮತ್ತೋರ್ವ ಗೋವಿಂದ್ ದಾಸ್ ಎನ್ನುವವರನ್ನು ಪೊಲೀಸರು ಬಂಧಿಸಿದ್ದಾರೆ.

ಮಾಹಿತಿಯ ಪ್ರಕಾರ, ಶುಕ್ಲಾ 15 ದಿನಗಳ ಹಿಂದಷ್ಟೇ ಮೃತ ಸಾಧು ಜೊತೆ ವಾಸಿಸಲು ಪ್ರಾರಂಭಿಸಿದ್ದರು ಮತ್ತು ಅವರು ಆಹಾರ ತಯಾರಿಸುತ್ತಿದ್ದರು. 

ಎಲ್ಲಾ ಕೊಠಡಿಗಳಲ್ಲಿ ಸಿಸಿಟಿವಿ ಅಳವಡಿಸಲಾಗಿತ್ತು. ಆದರೆ, ಯಾರೋ ಅದನ್ನು ಸ್ವಿಚ್ ಆಫ್ ಮಾಡಿದ್ದಾರೆ. ಸಿಸಿಟಿವಿ ಸ್ವಿಚ್ ಆಫ್ ಮಾಡಿದ ವ್ಯಕ್ತಿಯ ದೃಶ್ಯಾವಳಿಗಳು ಸಿಕ್ಕಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಸಿಟಿವಿ ದೃಶ್ಯ ಹಾಗೂ ಹಾರ್ಡ್ ಡಿಸ್ಕ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಎಸ್‌ಪಿ ರಾಜಕರಣ್ ನಾಯರ್ ತಿಳಿಸಿದ್ದಾರೆ. ಪ್ರಕರಣವನ್ನು ಭೇದಿಸಲು ನಾಲ್ಕು ತಂಡಗಳನ್ನು ನಿಯೋಜಿಸಲಾಗಿದೆ.

SCROLL FOR NEXT