ದೇಶ

ನವದೆಹಲಿ: ಬಂಧನ ವಿರೋಧಿಸಿ ಸಂಜಯ್ ಸಿಂಗ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

Nagaraja AB

ನವದೆಹಲಿ: ರದ್ದಾದ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷದ ನಾಯಕ ಸಂಜಯ್ ಸಿಂಗ್ ಬಂಧನ ಹಾಗೂ ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದಿರುವ ವಿಚಾರದಲ್ಲಿ ಮಧ್ಯಪ್ರವೇಶಿಸಲು ದೆಹಲಿ ಹೈಕೋರ್ಟ್ ಶುಕ್ರವಾರ ನಿರಾಕರಿಸಿದೆ.

ಬಂಧನ ಹಾಗೂ ಇಡಿ ವಶ ವಿರೋಧಿಸಿ ಸಂಜಯ್ ಸಿಂಗ್ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಸ್ವರಣಾ ಕಾಂತ ಶರ್ಮಾ, ಇದರ ಆಧಾರದ ಮೇಲೆ ಜಾಮೀನು ನೀಡಲು ಸಾಧ್ಯವಿಲ್ಲ ಎಂದರು. ಅಕ್ಟೋಬರ್ 4 ರಂದು ಇಡಿಯಿಂದ ಬಂಧನಕ್ಕೊಳಗಾದ ಸಿಂಗ್, 2021-22ರ ದೆಹಲಿ ಅಬಕಾರಿ ನೀತಿಯ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನ ಮತ್ತು ಇಡಿ ವಶದಲ್ಲಿರುವುದನ್ನು ಪ್ರಶ್ನಿಸಿ ಕಳೆದ ವಾರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಸಿಬಿಐ ಎಫ್ ಐಆರ್ ನಿಂದ ಇಡಿ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿತ್ತು.

ಸಿಬಿಐ ಮತ್ತು ಇಡಿ ಪ್ರಕಾರ, ದೆಹಲಿ ಅಬಕಾರಿ ನೀತಿ 2021-22 ಮಾರ್ಪಡಿಸುವಾಗ ಅಕ್ರಮಗಳು ನಡೆದಿವೆ ಮತ್ತು ಪರವಾನಗಿ ಹೊಂದಿರುವವರಿಗೆ ಅನಪೇಕ್ಷಿತ ಅನುಕೂಲಗಳನ್ನು ವಿಸ್ತರಿಸಲಾಗಿದೆ. ಕೆಲವು ಮದ್ಯ ತಯಾರಕರು, ಸಗಟು ವ್ಯಾಪಾರಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ಅನುಕೂಲವಾಗುವ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಸಿಂಗ್ ಅವರ ಬಂಧನ 'ಅಕ್ರಮ, ದುರುದ್ದೇಶಪೂರಿತವಾಗಿದ್ದು, ಅವರನ್ನು ಬಿಡುಗಡೆ ಮಾಡಬೇಕು ಎಂದು ಅವರ ಪರ ವಕೀಲರು ವಾದಿಸಿದರು. ಸಂಜಯ್ ಸಿಂಗ್ ಬಂಧನದ ನಂತರ ವಿಚಾರಣಾ ನ್ಯಾಯಾಲಯ ಅವರನ್ನು ಇಡಿ ವಶಕ್ಕೆ ನೀಡಿತ್ತು. 
ಅಕ್ಟೋಬರ್ 27 ರವರೆಗೆ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಯಿತು.

SCROLL FOR NEXT