ಜಗ್ತಿಯಾಲ್ (ತೆಲಂಗಾಣ): ರಾಹುಲ್ ಗಾಂಧಿಯನ್ನು 'ಪೇಪರ್ ಟೈಗರ್' ಮತ್ತು ಸ್ಥಳೀಯ ರಾಜಕೀಯವನ್ನು ಅರ್ಥಮಾಡಿಕೊಳ್ಳದ ವ್ಯಕ್ತಿ ಎಂದಿರುವ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಎಂಎಲ್‌ಸಿ ಮತ್ತು ಮುಖ್ಯಮಂತ್ರಿ ಕೆಸಿಆರ್ ಅವರ ಪುತ್ರಿ ಕೆ. ಕವಿತಾ ಶನಿವಾರ ತಮ್ಮ ದಾಳಿಯನ್ನು ಮುಂದುವರೆಸಿದ್ದಾರೆ.
ತೆಲಂಗಾಣ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಈ ವಾರದ ಆರಂಭದಲ್ಲಿ ಚುನಾವಣಾ ರ್ಯಾಲಿಯಲ್ಲಿ ತೆಲಂಗಾಣ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ ನಂತರ, ರಾಹುಲ್ ಗಾಂಧಿ ವಿರುದ್ಧ ಕವಿತಾ ಕಿಡಿಕಾರಿದ್ದಾರೆ.
'ರಾಹುಲ್ ಗಾಂಧಿಯವರು ‘ಬಬ್ಬರ್ ಶೇರ್’ ಅಲ್ಲ, ಬದಲಿಗೆ ಅವರು ಪೇಪರ್ ಹುಲಿ. ಯಾಕೆಂದರೆ ಯಾರೇ ಬರೆದು ಕೊಟ್ಟರೂ ಅದನ್ನೇ ಓದಿಕೊಂಡು ಹೋಗುತ್ತಾರೆ. ಅವರಿಗೆ ಸ್ಥಳೀಯ ಪರಿಸ್ಥಿತಿ ಅರ್ಥವಾಗುತ್ತಿಲ್ಲ. ಸ್ಥಳೀಯ ರಾಜಕೀಯವನ್ನು ಅರ್ಥಮಾಡಿಕೊಳ್ಳಲು ಆಗಿಲ್ಲ ಮತ್ತು ಅವರು ಈ ಪ್ರದೇಶದ ಸಂಪ್ರದಾಯಗಳು ಅಥವಾ ಸಂಸ್ಕೃತಿಯನ್ನು ಗೌರವಿಸುವುದಿಲ್ಲ ಅಥವಾ ಅರ್ಥಮಾಡಿಕೊಳ್ಳುವುದಿಲ್ಲ' ಎಂದು ಶನಿವಾರ ಸುದ್ದಿಸಂಸ್ಥೆ ಎಎನ್‌ಐಗೆ ತಿಳಿಸಿದರು.
ಕಾಂಗ್ರೆಸ್ ಮತ್ತು ಕೆಸಿಆರ್ ನೇತೃತ್ವದ ಬಿಆರ್‌ಎಸ್ ನಾಯಕರು ಮಾತಿನ ಸಮರದಲ್ಲಿ ತೊಡಗಿದ್ದು, ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಮರಳಲು ಪ್ರಯತ್ನಿಸುತ್ತಿದ್ದಾರೆ.
'ರಾಹುಲ್ ಗಾಂಧಿಯವರೇ, ನೀವು ಕಾಗದದ ಹುಲಿಯಾಗಿದ್ದೀರಿ. ದಯವಿಟ್ಟು ತೆಲಂಗಾಣಕ್ಕೆ ಬನ್ನಿ. ಆದರೆ, ನೀವು ಸಾರ್ವಜನಿಕವಾಗಿ ಏನು ಹೇಳುತ್ತಿದ್ದೀರಿ ಎಂಬುದನ್ನು ದಯವಿಟ್ಟು ಗಮನದಲ್ಲಿಟ್ಟುಕೊಳ್ಳಿ. ತೆಲಂಗಾಣ ಅತ್ಯಂತ ರಾಜಕೀಯ ಅರಿವು ಹೊಂದಿರುವ ರಾಜ್ಯ. ನಾವು ನಮ್ಮ ರಾಜ್ಯಕ್ಕಾಗಿ ಹೋರಾಡಿದ್ದೇವೆ. ನಮ್ಮ ರಾಜ್ಯಕ್ಕಾಗಿ ನಮ್ಮ ಪ್ರಾಣವನ್ನು ನೀಡಿದ್ದೇವೆ' ಎಂದು ಬಿಆರ್‌ಎಸ್ ನಾಯಕಿ ಹೇಳಿದ್ದಾರೆ.
ಇದನ್ನೂ ಓದಿ: 'ಯುವಕರ ಕನಸುಗಳು, ಆಕಾಂಕ್ಷೆಗಳ ಕೊಲೆ': ತೆಲಂಗಾಣದಲ್ಲಿ ಉದ್ಯೋಗಾಕಾಂಕ್ಷಿ ಆತ್ಮಹತ್ಯೆ ಬಗ್ಗೆ ರಾಹುಲ್ ಗಾಂಧಿ ಟೀಕೆ
'ಮುಂದಿನ ಬಾರಿ ನೀವು ಇಲ್ಲಿಗೆ ಬಂದಾಗ ಕೇವಲ 'ದೋಸಾ ಬಂಡಿ' (ಸ್ಟಾಲ್) ಗೆ ಹೋಗಿ ದೋಸೆ ತಿನ್ನಬೇಡಿ. ಆದರೆ, ತೆಲಂಗಾಣದ ಹುತಾತ್ಮರ ತಾಯಿಯ ಬಳಿಗೆ ಹೋಗಿ; ಆಗ ನಿಮಗೆ ತೆಲಂಗಾಣದ ಸಮಸ್ಯೆ ತಿಳಿಯುತ್ತದೆ. ಇಲ್ಲದಿದ್ದರೆ ನಿಮಗೆ ಇಲ್ಲಿನ ಪರಿಸ್ಥಿತಿ ಅರ್ಥವಾಗುವುದಿಲ್ಲ' ಎಂದು ತಿಳಿಸಿದರು.
ತೆಲಂಗಾಣ ವಿಧಾನಸಭಾ ಚುನಾವಣೆಯನ್ನು ನವೆಂಬರ್ 30ರಂದು ನಡೆಸಲು ನಿರ್ಧರಿಸಲಾಗಿದೆ ಎಂದು ಅಕ್ಟೋಬರ್ 9ರಂದು ಭಾರತೀಯ ಚುನಾವಣಾ ಆಯೋಗ (ಇಸಿಐ) ಘೋಷಿಸಿತು. ಮತ ಎಣಿಕೆ ಡಿಸೆಂಬರ್ 3 ರಂದು ನಡೆಯಲಿದೆ.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ, ಆಡಳಿತಾರೂಢ ಭಾರತ್ ರಾಷ್ಟ್ರ ಸಮಿತಿ ಮತ್ತು ಕಾಂಗ್ರೆಸ್ ನಡುವೆ ತ್ರಿಕೋನ ಸ್ಪರ್ಧೆಗೆ ತೆಲಂಗಾಣ ಸಾಕ್ಷಿಯಾಗಲಿದೆ.
2018 ರಲ್ಲಿ ನಡೆದ ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ, ಬಿಆರ್‌ಎಸ್ 119 ರಲ್ಲಿ 88 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು ಮತ್ತು ಶೇ 47.4 ರಷ್ಟು ಮತಗಳನ್ನು ಪಡೆಯಿತು. ಕಾಂಗ್ರೆಸ್ 19 ಸ್ಥಾನಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಅದರ ಮತ ಹಂಚಿಕೆ ಶೇ 28.7 ಆಗಿದೆ.