ದೇಶ

ತೆಲಂಗಾಣ ವಿಧಾನಸಭೆ ಚುನಾವಣೆ: ಬಿಜೆಪಿ ಮೊದಲ ಪಟ್ಟಿ ಬಿಡುಗಡೆ, ಮೂವರು ಹಾಲಿ ಸಂಸದರಿಗೆ ಟಿಕೆಟ್

Sumana Upadhyaya

ತೆಲಂಗಾಣ: ಮುಂಬರುವ ತೆಲಂಗಾಣ ರಾಜ್ಯ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬೋತ್‌ನಿಂದ ಸಂಸದ ಸೋಯಂ ಬಾಪು ರಾವ್, ಕೊರಟ್ಲಾದಿಂದ ಅರವಿಂದ್ ಧರ್ಮಪುರಿ ಮತ್ತು ಕರೀಂನಗರದಿಂದ ಬಂಡಿ ಸಂಜಯ್ ಕುಮಾರ್ ಅವರನ್ನು ಪಕ್ಷ ಕಣಕ್ಕಿಳಿಸಿದೆ. ಹಿಂದಿನ ದಿನ ಅಮಾನತು ಹಿಂಪಡೆದ ಟಿ ರಾಜಾ ಸಿಂಗ್ ಅವರು ಗೋಶಾಮಹಲ್‌ನಿಂದ ಸ್ಪರ್ಧಿಸಲಿದ್ದಾರೆ. ಹಾಲಿ ಶಾಸಕ ಮತ್ತು ಚುನಾವಣಾ ಸಮಿತಿಯ ಮುಖ್ಯಸ್ಥ ಈಟಾಲ ರಾಜೇಂದರ್ ಅವರು ಪ್ರಸ್ತುತ ಕ್ಷೇತ್ರವಾದ ಹುಜೂರಾಬಾದ್‌ನಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.

ರಾಜ್ಯ ವಿಧಾನಸಭೆ ಹೊಂದಿರುವ 119 ಸ್ಥಾನಗಳ ಪೈಕಿ 52 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ. ತೆಲಂಗಾಣದಲ್ಲಿ ನವೆಂಬರ್ 30 ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 3 ರಂದು ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ಮಿಜೋರಾಂ ರಾಜ್ಯಗಳ ಜೊತೆಗೆ ಫಲಿತಾಂಶ ಪ್ರಕಟವಾಗಲಿದೆ.

ಬಿಜೆಪಿ ರಾಜ್ಯದಿಂದ ನಾಲ್ಕು ಲೋಕಸಭಾ ಸಂಸದರನ್ನು ಹೊಂದಿದೆ. ಕೇಂದ್ರ ಸಚಿವ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಜಿ ಕಿಶನ್ ರೆಡ್ಡಿ ಮತ್ತೊಬ್ಬ ಸಂಸದರಾಗಿದ್ದು, ಅವರ ಹೆಸರು ಮೊದಲ ಪಟ್ಟಿಯಲ್ಲಿಲ್ಲ. ದಕ್ಷಿಣದ ಯಾವುದೇ ರಾಜ್ಯಗಳಲ್ಲಿ ಬಿಜೆಪಿ ಆಡಳಿತ ನಡೆಸದ ಕಾರಣ ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಮುನ್ನ ಈ ಚುನಾವಣೆಯು ಪಕ್ಷಕ್ಕೆ ನಿರ್ಣಾಯಕವಾಗಿದೆ. ಅಧಿಕಾರದಲ್ಲಿದ್ದ ಏಕೈಕ ರಾಜ್ಯ ಕರ್ನಾಟಕದಲ್ಲಿ ಬಿಜೆಪಿಯನ್ನು ಕಾಂಗ್ರೆಸ್ ಸೋಲಿಸಿ ಅಧಿಕಾರದ ಗದ್ದುಗೆ ಏರಿತು. 

ಪಕ್ಷದ ಮುಖ್ಯಸ್ಥ ಜೆ ಪಿ ನಡ್ಡಾ ನೇತೃತ್ವದಲ್ಲಿ ಶುಕ್ರವಾರ ನಡೆದ ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿ (CEC) ಸಭೆಯಲ್ಲಿ ಹೆಸರುಗಳನ್ನು ಅಂತಿಮಗೊಳಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ ಕೂಡ ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರತಿಪಕ್ಷ ಕಾಂಗ್ರೆಸ್ ಅಕ್ಟೋಬರ್ 15 ರಂದು ತೆಲಂಗಾಣ ಚುನಾವಣೆಗೆ 55 ಅಭ್ಯರ್ಥಿಗಳನ್ನು ಒಳಗೊಂಡ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿತ್ತು, ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ಅನುಮುಲಾ ರೇವಂತ್ ರೆಡ್ಡಿ ಕೊಡಂಗಲ್‌ನಿಂದ ಮತ್ತು ತೆಲಂಗಾಣ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಉತ್ತಮ್ ಕುಮಾರ್ ರೆಡ್ಡಿ ಹುಜೂರ್‌ನಗರದಿಂದ ಕಣಕ್ಕಿಳಿದಿದ್ದಾರೆ.

ತೆಲಂಗಾಣ ವಿಧಾನಸಭೆಗೆ ನವೆಂಬರ್ 30 ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 3 ರಂದು ಫಲಿತಾಂಶ ಪ್ರಕಟವಾಗಲಿದೆ. ರಾಜ್ಯದ ಒಟ್ಟು 35,356 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದ್ದು, 14,464 ನಗರ ಪ್ರದೇಶಗಳಲ್ಲಿ ಮತ್ತು 20,892 ಗ್ರಾಮೀಣ ಪ್ರದೇಶದಲ್ಲಿ ಮತದಾನ ನಡೆಯಲಿದೆ.

SCROLL FOR NEXT