ದೇಶ

ಭೋಪಾಲ್: ನಿವೃತ್ತ ನ್ಯಾಯಾಧೀಶ ಆತ್ಮಹತ್ಯೆಗೆ ಶರಣು; ಖಿನ್ನತೆ ಕಾರಣವೆಂದ ಪೊಲೀಸರು

Lingaraj Badiger

ಭೋಪಾಲ್: ನಿವೃತ್ತ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರೊಬ್ಬರು ಭೋಪಾಲ್ ನ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

ಖಿನ್ನತೆಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ನಿವೃತ್ತ ನ್ಯಾಯಾಧೀಶ ಪ್ರೇಮ್ ಸಿನ್ಹಾ(63) ಅವರು ಮಂಗಳವಾರ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನ್ಯಾಯಾಧೀಶರ ಕುಟುಂಬ ಸದಸ್ಯರ ಹೇಳಿಕೆ ಉಲ್ಲೇಖಿಸಿ ಹಬೀಬ್‌ಗಂಜ್ ಪೊಲೀಸ್ ಠಾಣೆಯ ಉಸ್ತುವಾರಿ ಮನೀಶ್ ರಾಜ್ ಭಡೋರಿಯಾ ಅವರು ತಿಳಿಸಿದ್ದಾರೆ.

ಸಿನ್ಹಾ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸ್ಥಳದಲ್ಲಿ ಪತ್ತೆಯಾಗಿರುವ ಡೆತ್ ನೋಟ್ ಪ್ರಕಾರ, "ನಕಾರಾತ್ಮಕ" ಆಲೋಚನೆಗಳಿಂದ ವಿಚಲಿತರಾದ ಕಾರಣ ತೀವ್ರ ಹೆಜ್ಜೆ ಇಟ್ಟಿದ್ದಾರೆ.

ಉಮಾರಿಯಾದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾಗಿ ನಿವೃತ್ತರಾದ ನಂತರ ಸಿನ್ಹಾ ಅವರನ್ನು ರಾಜ್ಯದ ನ್ಯಾಯಮಂಡಳಿಯ ಸದಸ್ಯರನ್ನಾಗಿ ನೇಮಿಸಲಾಗಿತ್ತು.

ಕಳೆದ ಒಂದೇರಡು ತಿಂಗಳಿನಿಂದ ಖಿನ್ನತೆಗೆ ಒಳಗಾಗಿದ್ದ ಸಿನ್ಹಾ ಅವರು ಒಂಟಿಯಾಗಿ ವಾಸಿಸಲು ಆರಂಭಿಸಿದ್ದರು ಎಂದು ಕುಟುಂಬಸ್ಥರು ಪೊಲೀಸರಿಗೆ ತಿಳಿಸಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ವೈದ್ಯರ ಬಳಿಗೆ ಕರೆದೊಯ್ಯಲಾಗಿತ್ತು ಎಂದು ಭಡೋರಿಯಾ ಅವರು ತಿಳಿಸಿದ್ದಾರೆ.

SCROLL FOR NEXT