ದೇಶ

ವಿಪಕ್ಷ ನಾಯಕನೇ ಇಲ್ಲದ ಬಿಜೆಪಿ ಕಾಂಗ್ರೆಸ್ ಸರ್ಕಾರದ ಅಸ್ಥಿರತೆಗೆ ಯತ್ನಿಸುತ್ತಿರುವುದು ಹಾಸ್ಯಾಸ್ಪದ: ಕೆಸಿ ವೇಣುಗೋಪಾಲ್

Ramyashree GN

ನವದೆಹಲಿ: ಕರ್ನಾಟಕದ ಬಿಜೆಪಿಯು ದಕ್ಷಿಣದ ರಾಜ್ಯದಲ್ಲಿನ ತನ್ನ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಶನಿವಾರ ಆರೋಪಿಸಿದೆ.

ಬಿಜೆಪಿ ನಾಯಕರ ತಂಡವೊಂದು ಶಾಸಕರಿಗೆ ಪಕ್ಷಾಂತರ ಮಾಡುವ ಆಫರ್‌ಗಳೊಂದಿಗೆ ಸಂಪರ್ಕಿಸುತ್ತಿದೆ ಎಂದು ಕಾಂಗ್ರೆಸ್ ಶಾಸಕ ರವಿಕುಮಾರ್ ಗೌಡ (ಗಣಿಗ) ಹೇಳಿಕೆ ನೀಡಿರುವ ಮಾಧ್ಯಮ ವರದಿಯನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

'ವಿಪಕ್ಷ ನಾಯಕ ಅಥವಾ ಅಜೆಂಡಾ ಇಲ್ಲದ ಪಕ್ಷವು (ಬಿಜೆಪಿ) ಜನಾದೇಶವನ್ನು ರದ್ದುಗೊಳಿಸುವ ಹಳೆಯ ಅಭ್ಯಾಸವನ್ನು ಈಗ ಆಶ್ರಯಿಸುತ್ತಿದೆ. ದೆಹಲಿಯಲ್ಲಿರುವ ತಮ್ಮ ನಾಯಕರ ನಿರ್ದೇಶನದ ಮೇರೆಗೆ ಕರ್ನಾಟಕ ಬಿಜೆಪಿಯು ನಮ್ಮ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಮತ್ತೊಂದು ನಗೆಪಾಟಲಿನ ಪ್ರಯತ್ನ ಮಾಡುತ್ತಿದೆ' ಎಂದು ವೇಣುಗೋಪಾಲ್ ಆರೋಪಿಸಿದ್ದಾರೆ.

'ಆದರೆ, ನಮ್ಮ ಕಾಂಗ್ರೆಸ್ ಶಾಸಕರು ನಿಷ್ಠಾವಂತರಾಗಿದ್ದು, ಈ ಸರ್ಕಾರ ಜಾರಿಗೆ ತಂದಿರುವ ಖಾತರಿ ಯೋಜನೆಗಳ ಅನುಷ್ಠಾನವು ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. ಬಹುಶಃ ಅವರು ಮೊದಲು ವಿರೋಧ ಪಕ್ಷದ ನಾಯಕ ಮತ್ತು ಪಕ್ಷದ ಅಧ್ಯಕ್ಷರನ್ನು ಹುಡುಕಬೇಕು ಅಲ್ಲವೇ?' ಎಂದು ಟೀಕಿಸಿದ್ದಾರೆ.

2019ರಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಪತನದ ಹಿಂದೆ ಇದ್ದ ತಂಡ ಇದೀಗ 50 ಕೋಟಿ ರೂ. ಹಾಗೂ ಸಚಿವ ಸ್ಥಾನದ ಆಮಿಷವೊಡ್ಡಿ ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಕೆಲಸ ಮಾಡುತ್ತಿದೆ ಮತ್ತು ಈಗಾಗಲೇ ನಾಲ್ವರು ಶಾಸಕರನ್ನು ಸಂಪರ್ಕಿಸಲಾಗಿದೆ ಎಂದು ಗಣಿಗ ರವಿ ಶುಕ್ರವಾರ ಆರೋಪಿಸಿದ್ದಾರೆ.

ನಮ್ಮ ಪಕ್ಷದ ಪ್ರಾಮಾಣಿಕ ಶಾಸಕರು ಈ ಮಾಹಿತಿಯನ್ನು ಪಕ್ಷದೊಂದಿಗೆ ಹಂಚಿಕೊಂಡಿದ್ದಾರೆ. ಸರ್ಕಾರ ಅಸ್ಥಿರಗೊಳಿಸುವುದಕ್ಕೆ ಹಿರಿಯ ಶಾಸಕರು ಹಾಗೂ ಹೊಸ ಶಾಸಕರನ್ನೂ ಸಂಪರ್ಕಿಸಲಾಗಿದೆ. ಆದರೆ, ಯಾವೊಬ್ಬ ಶಾಸಕರೂ ಅವರ ಆಮಿಷಕ್ಕೆ ಬಲಿಯಾಗಿಲ್ಲ. ಈ ಬೆಳವಣಿಗೆ ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ. ಈ ಸಂಬಂಧ ಇರುವ ವಿಡಿಯೋ ಹಾಗೂ ದಾಖಲೆಗಳನ್ನು ಶೀಘ್ರವೇ ಬಿಡುಗಡೆ ಮಾಡಲಾಗುತ್ತದೆ ಎಂದು ಶಾಸಕರು ಹೇಳಿದ್ದಾರೆ.

ಕಳೆದ ಮೇನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಬಹುಮತ ಪಡೆದು, ಬಿಜೆಪಿಯನ್ನು ಕೆಳಗಿಳಿಸಿತ್ತು. ಮೇ 20ರಂದು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

SCROLL FOR NEXT