ದೇಶ

CPR For Snake: ಪ್ರಜ್ಞೆ ತಪ್ಪಿ ಬಿದಿದ್ದ ಹಾವಿಗೆ ಬಾಯಿಂದ ಕೃತಕ ಉಸಿರಾಟ ನೀಡಿ ಜೀವದಾನ, ಪೊಲೀಸ್ ಸಿಬ್ಬಂದಿ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ

Srinivasamurthy VN

ಭೋಪಾಲ್: ಸಿಂಪಡಿಸಿದ್ದ ರಾಸಾಯನಿಕ ಕೀಟನಾಶಕ ವಾಸನೆಗೆ ಪ್ರಜ್ಞೆ ತಪ್ಪಿ ಬಿದಿದ್ದ ಹಾವಿಗೆ ಪೊಲೀಸ್ ಸಿಬ್ಬಂದಿಯೊಬ್ಬರು ತಮ್ಮ ಬಾಯಿಂದ ಕೃತಕ ಉಸಿರಾಟ ನೀಡಿ ಜೀವ ಉಳಿಸಿರುವ ಅಪರೂಪದ ಘಟನೆ ಮಧ್ಯಪ್ರದೇಶ (Madhya Pradesh)ದಲ್ಲಿ ನಡೆದಿದೆ.

ಮಧ್ಯಪ್ರದೇಶದ ನರ್ಮದಾಪುರಂನಲ್ಲಿ ಈ ಅಪರೂಪದ ಘಟನೆ ನಡೆದಿದ್ದು, ಪ್ರಜ್ಞೆ ತಪ್ಪಿ ಬಿದ್ದಿದ್ದ ಹಾವಿಗೆ ಅವರು ಸಿಪಿಆರ್‌ (Cardiopulmonary Resuscitation) ಅಥವಾ ಹೃದಯ ಮತ್ತು ಶ್ವಾಸಕೋಶಕ್ಕೆ ಪ್ರಚೋದನೆ ನೀಡುವುದು ಅಥವಾ ಬಾಯಲ್ಲಿ ಬಾಯಿಟ್ಟು ಊದುವುದು) ನೀಡುವ ದೃಶ್ಯ ಇದೀಗ ವಿಡಿಯೋ ವೈರಲ್‌ (Viral Video) ಆಗಿದೆ. ಅತುಲ್‌ ಶರ್ಮ ಎನ್ನುವ ಕಾನ್ಸ್‌ಟೇಬಲ್‌ ಹಾವಿನ ಪ್ರಾಣ ಕಾಪಾಡಿದ ವ್ಯಕ್ತಿಯಾಗಿದ್ದು ಅವರ ಕಾರ್ಯಕ್ಕೆ ಎಲ್ಲಡೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.

ಏನಿದು ಘಟನೆ?
ವಿಷ ರಹಿತ ಹಾವೊಂದು ಜನ ವಸತಿ ಪ್ರದೇಶಕ್ಕೆ ನುಗಿತ್ತು. ಅದನ್ನು ಹೊರ ಹಾಕುವ ಭರದಲ್ಲಿ ಸಾರ್ವಜನಿಕರು ಕ್ರಿಮಿನಾಶಕ (pesticide) ವನ್ನು ಬಳಸಿದ್ದರಿಂದ ಅದರ ವಾಸನೆಗೆ ಹಾವು ಪ್ರಜ್ಞೆ ಕಳೆದುಕೊಂಡಿತ್ತು. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಸ್ಥಳಕ್ಕೆ ಆಗಮಿಸಿದ ಅತುಲ್‌ ಶರ್ಮ ಮೊದಲು ಹಾವನ್ನು ಕೈಗೆತ್ತಿಕೊಂಡು ಪರಿಶೀಲನೆ ನಡೆಸಿದರು. ಅದು ಜೀವಂತವಾಗಿರುವುದು ಕಂಡು ಬಂದ ಹಿನ್ನಲೆಯಲ್ಲಿ ಹಾವಿನ ಬಾಯಿಗೆ ತಮ್ಮ ಬಾಯಿ ಇಟ್ಟು ಸಿಪಿಆರ್‌ ನೀಡಿದ್ದಾರೆ.

ಸ್ವಲ್ಪ ಹೊತ್ತಿನಲ್ಲಿ ಹಾವು ಕೊಂಚ ಚೇತರಿಸಿಕೊಂಡಿದೆ. ಬಳಿಕ ಅದರ ತಲೆಗೆ ನೀರು ಚಿಮುಕಿಸಿದ್ದಾರೆ. ನಂತರ ಇನ್ನೊಮ್ಮೆ ಸಿಪಿಆರ್‌ ನೀಡಲಾಯಿತು. ಜತೆಗೆ ಅತುಲ್‌ ಶರ್ಮ ಹಾವಿನ ತಲೆ, ನೆತ್ತಿಯನ್ನು ಮೃದುವಾಗಿ ಉಜ್ಜಿದರು. ಬಳಿಕ ಹಾವು ಬಾಯಿ ತೆರೆದು ಉಸಿರಾಡಿತು. ಕೊನೆಗೂ ಚೇತರಿಸಿಕೊಂಡ ಹಾವನ್ನು ಕಾಡಿಗೆ ಬಿಟ್ಟು ಬರಲಾಯಿತು.

ಇನ್ನು ಅತುಲ್‌ ಶರ್ಮ ಡಿಸ್ಕವರಿ ಚಾನೆಲ್ ನಲ್ಲಿ ಹಾವಿಗೆ ಸಿಪಿಆರ್ ನೀಡುವುದನ್ನು ನೋಡಿ ಅದನ್ನು ಇಲ್ಲಿ ಪ್ರಯೋಗ ಮಾಡಿ ಹಾವಿನ ಜೀವ ಉಳಿಸಿದ್ದಾರೆ. ಪೊಲೀಸ್ ಸಿಬ್ಬಂದಿ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. 
 

SCROLL FOR NEXT