ಮುಂಬೈ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸಾಧ್ಯವಾದಷ್ಟೂ ಒಟ್ಟಾಗಿ ಹೋರಾಡಲು INDIA ಮೈತ್ರಿಕೂಟ ಶುಕ್ರವಾರ ನಿರ್ಧರಿಸಿದೆ ಮತ್ತು ಕೊಟ್ಟು- ತೆಗೆದುಕೊಳ್ಳುವ ಉತ್ಸಾಹದಲ್ಲಿ ಸೀಟು ಹಂಚಿಕೆ ವ್ಯವಸ್ಥೆಯನ್ನು ಶೀಘ್ರವಾಗಿ ಮುಕ್ತಾಯ ಗೊಳಿಸಲಾಗುವುದು ಎಂದು ಹೇಳಿದೆ. ಇದನ್ನು ಪರಿಣಾಮಕಾರಿ ಅಳವಡಿಸಿಕೊಳ್ಳಲು ನಿರ್ಣಯವೊಂದನ್ನು ಅಂಗೀಕರಿಸಲಾಗಿದೆ.
ಜುಡೇಗಾ ಭಾರತ್, ಜೀತೇಗ ಭಾರತ, (ಭಾರತ ಒಗ್ಗೂಡುತ್ತದೆ, ಭಾರತ ಗೆಲ್ಲುತ್ತದೆ) ಚುನಾವಣೆಯ ತನ್ನ ಥೀಮ್ ಎಂದು ಮೈತ್ರಿಕೂಟ ಹೇಳಿದೆ. ನಾವು ಭಾರತದ ಪಕ್ಷಗಳು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸಾಧ್ಯವಾದಷ್ಟು ಒಟ್ಟಾಗಿ ಸ್ಪರ್ಧಿಸಲು ನಿರ್ಧರಿಸಿದ್ದೇವೆ. ವಿವಿಧ ರಾಜ್ಯಗಳಲ್ಲಿ ಸೀಟು ಹಂಚಿಕೆಯ ವ್ಯವಸ್ಥೆಯನ್ನು ತಕ್ಷಣವೇ ಪ್ರಾರಂಭಿಸಲಾಗುವುದು ಮತ್ತು ಕೊಟ್ಟು- ತೆಗೆದುಕೊಳ್ಳುವ ಮನೋಭಾವದಲ್ಲಿ ಶೀಘ್ರವಾಗಿ ಈ ಪ್ರಕಿಯೆಯನ್ನು ಮುಕ್ತಾಯಗೊಳಿಸಲಾಗುವುದು ಎಂದು ನಿರ್ಣಯದಲ್ಲಿ ಹೇಳಿದೆ.
ಸಾರ್ವಜನಿಕ ಕಾಳಜಿ ಮತ್ತು ಪ್ರಾಮುಖ್ಯತೆಯ ವಿಷಯಗಳ ಕುರಿತು ದೇಶದ ವಿವಿಧ ಭಾಗಗಳಲ್ಲಿ ಶೀಘ್ರವಾಗಿ ಸಾರ್ವಜನಿಕ ರ‍್ಯಾಲಿ ಆಯೋಜಿಸಲು ನಿರ್ಧರಿಸುತ್ತೇವೆ. INDIA ಪಕ್ಷಗಳು ತಮ್ಮ ಸಂವಹನ ಮತ್ತು ಮಾಧ್ಯಮ ಕಾರ್ಯತಂತ್ರಗಳನ್ನು ಸಂಘಟಿಸುತ್ತವೆ ಮತ್ತು ವಿವಿಧ ಭಾಷೆಗಳಲ್ಲಿ "ಜುಡೇಗಾ ಭಾರತ್, ಜಿತೀಗಾ ಇಂಡಿಯಾ" ಎಂಬ ವಿಷಯದೊಂದಿಗೆ ಪ್ರಚಾರಗಳನ್ನು ನಡೆಸುತ್ತವೆ ಎಂದು ಹೇಳಲಾಗಿದೆ.
ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತಮ್ಮ ಯೋಜನೆಗಳನ್ನು ಅಂತಿಮಗೊಳಿಸಲು ಮುಂಬೈನಲ್ಲಿ ಸುಮಾರು 28 ವಿಪಕ್ಷಗಳ ನಾಯಕರು ಸಭೆ ಸೇರಿದ್ದರು. ಗಂಟೆಗಳ ಚರ್ಚೆಯ ನಂತರ ಸಮನ್ವಯ ಸಮಿತಿ ರಚನೆಯೊಂದಿಗೆ ಸೆಪ್ಟೆಂಬರ್ ಅಂತ್ಯದೊಳಗೆ ಸೀಟು ಹಂಚಿಕೆಯ ಕೆಲಸವನ್ನು ಪ್ರಾರಂಭಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಇದನ್ನೂ ಓದಿ: ಇಂಡಿಯಾ ಮೈತ್ರಿಕೂಟದ ಲೋಗೋ ಬಿಡುಗಡೆ ಮುಂದೂಡಿಕೆ; ಒಂದು ದೇಶ ಒಂದು ಚುನಾವಣೆ ಹಿಂದೆ ಪಿತೂರಿ ಎಂದ ವಿಪಕ್ಷಗಳು
ರಾಷ್ಟ್ರವ್ಯಾಪಿ ಸೀಟು ಹಂಚಿಕೆ ನಡೆಯಲಿದೆ ಎಂದು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕರು ಆಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದರು. ಇದೇ ವೇಳೆ ಬಿಜೆಪಿಗೆ ತಿರುಗೇಟು ನೀಡಿದ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಭ್ರಷ್ಟಾಚಾರದ ವಿರುದ್ಧ ಹೋರಾಡಲು INDIA ಮೈತ್ರಿಕೂಟ ಸಂಕಲ್ಪ ಮಾಡಿದೆ ಮತ್ತು ಮಿತ್ರ-ಪರಿವಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ದೊಡ್ಡ ಕೈಗಾರಿಕೋದ್ಯಮಿಗಳಿಗೆ ಸಹಾಯ ಮಾಡಲು ಬಡವರ ಬದುಕನ್ನು ಹಾಳು ಮಾಡುತ್ತಿದೆ. ಹಣದುಬ್ಬರ, ನಿರುದ್ಯೋಗದ ವಿರುದ್ಧ ಹೋರಾಡಲು ನಾವೆಲ್ಲರೂ ಒಂದೇ ಗುರಿ ಹೊಂದಿದ್ದೇವೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.