ದೇಶ

ಬಾಲಸೋರ್ ರೈಲು ಅಪಘಾತ ಪ್ರಕರಣ; 3 ರೈಲ್ವೆ ಉದ್ಯೋಗಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ ಸಿಬಿಐ

Ramyashree GN

ನವದೆಹಲಿ: ಜೂನ್ 2ರಂದು ನಡೆದ ಭೀಕರ ಬಾಲಸೋರ್ ತ್ರಿವಳಿ ರೈಲು ಅಪಘಾತಕ್ಕೆ ಸಂಬಂಧಿಸಿದಂತೆ ಬಂಧಿಸಲಾದ ಮೂವರು ರೈಲ್ವೆ ಉದ್ಯೋಗಿಗಳ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಶನಿವಾರ ಚಾರ್ಜ್ ಶೀಟ್ ಸಲ್ಲಿಸಿದೆ. ಆರೋಪಗಳಲ್ಲಿ ನರಹತ್ಯೆ ಮತ್ತು ಸಾಕ್ಷ್ಯ ನಾಶವೂ ಸೇರಿದೆ.

ರೈಲ್ವೆ ನೌಕರರಾದ ಅರುಣ್ ಕುಮಾರ್ ಮಹಂತ (ಆಗ ಬಾಲಸೋರ್ ಸಿಗ್ನಲ್‌ ವಿಭಾಗದ ಹಿರಿಯ ಇಂಜಿನಿಯರ್), ಮೊಹಮ್ಮದ್ ಅಮೀರ್ ಖಾನ್ (ಸೊರೊ ವಿಭಾಗದ ಹಿರಿಯ ಇಂಜಿನಿಯರ್) ಮತ್ತು ಪಪ್ಪು ಕುಮಾರ್ (ಬಾಲಾಸೋರ್ ತಂತ್ರಜ್ಞ) ವಿರುದ್ಧ ಚಾರ್ಚ್ ಶೀಟ್ ಸಲ್ಲಿಸಲಾಗಿದೆ.

ರೈಲು ಅವಘಡಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಭುವನೇಶ್ವರದ ವಿಶೇಷ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಜುಲೈ 7ರಂದು ಈ ಮೂವರು ಆರೋಪಿಗಳನ್ನು ಬಂಧಿಸಲಾಗಿತ್ತು.

ತ್ರಿವಳಿ ರೈಲು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗಳ ವಿರುದ್ಧ ನರಹತ್ಯೆ ಮತ್ತು ಸಾಕ್ಷ್ಯ ನಾಶ ಆರೋಪಗಳು ಸೇರಿವೆ ಎಂದು ಸಿಬಿಐ ಆರೋಪಿಸಿದೆ.

ತನಿಖೆಯ ಸಮಯದಲ್ಲಿ ಪತ್ತೆ ಮಾಡಲಾದ ಪುರಾವೆಗಳ ಆಧಾರದ ಮೇಲೆ ಐಪಿಸಿಯ ಸೆಕ್ಷನ್ 304 (ಭಾಗ II), 34r/w 201 (ಸಾಕ್ಷ್ಯ ನಾಶ) ಮತ್ತು 1989ರ ರೈಲ್ವೆ ಕಾಯಿದೆಯ 153 (ವ್ಯಕ್ತಿಗಳ ಸುರಕ್ಷತೆಗೆ ಅಪಾಯವನ್ನುಂಟುಮಾಡುವುದು) ಅಡಿಯಲ್ಲಿ ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

SCROLL FOR NEXT