ದೇಶ

ಅರುಣಾಚಲ ಪ್ರದೇಶದಲ್ಲಿ ಜಿ-20 ಆಯೋಜನೆಗೆ ಚೀನಾ ಆಕ್ಷೇಪ: ಸಂದರ್ಶನದಲ್ಲಿ ಪ್ರಧಾನಿ ಮೋದಿ ಹೇಳಿದ್ದೇನು ಅಂದರೆ...

Srinivas Rao BV

ನವದೆಹಲಿ: ಕಾಶ್ಮೀರ ಹಾಗೂ ಅರುಣಾಚಲ ಪ್ರದೇಶದಲ್ಲಿ ಜಿ-20 ಸಭೆಗಳನ್ನು ಆಯೋಜನೆ ಮಾಡಿರುವುದಕ್ಕೆ ಚೀನಾ ಆಕ್ಷೇಪ ವ್ಯಕ್ತಪಡಿಸಿದೆ. 

ಪ್ರಧಾನಿ ಮೋದಿ ಪಿಟಿಐ ಗೆ ನೀಡಿರುವ ಸಂದರ್ಶನದಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. "ದೇಶದ ಯಾವುದೇ ಭಾಗದಲ್ಲಿ ಜಿ-20 ಸಭೆಗಳನ್ನು ನಡೆಸುವುದು ಭಾರತಕ್ಕೆ ಸ್ವಾಭಾವಿಕವಾಗಿದೆ" ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. 

ಭಾರತದ ಸಾಂಸ್ಕೃತಿಕ ಹಾಗೂ ಪ್ರಾದೇಶಿವ ವೈವಿಧ್ಯತೆಯನ್ನು ಜಾಗತಿಕ ವೇದಿಕೆಯಲ್ಲಿ ಪ್ರದರ್ಶಿಸುವುದಕ್ಕೆ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಜಿ-20 ಸಭೆಗಳನ್ನು ದೇಶಾದ್ಯಂತ ಹಮ್ಮಿಕೊಂಡಿದೆ. ಜಿ-20 ಸದಸ್ಯ ರಾಷ್ಟ್ರವೂ ಆಗಿರುವ ಚೀನಾ ಹಾಗೂ ಪಾಕಿಸ್ತಾನಗಳು ಕಾಶ್ಮೀರವನ್ನು ವಿವಾದಿತ ಪ್ರದೇಶ ಎಂದು ಹೇಳುತ್ತಿದ್ದು, ಅಲ್ಲಿ ಜಿ-20 ಸಭೆಯನ್ನು ನಡೆಸಿರುವುದನ್ನು ವಿರೋಧಿಸಿವೆ. 

ಇದಷ್ಟೇ ಅಲ್ಲದೇ ಅರುಣಾಚಲ ಪ್ರದೇಶದಲ್ಲಿ ಭಾರತದ ಸಾರ್ವಭೌಮತ್ವವನ್ನು ಚೀನಾ ಪ್ರಶ್ನಿಸಿದೆ. ಆದರೆ ಭಾರತ ಈಗಾಗಲೇ ಚೀನಾ-ಪಾಕಿಸ್ತಾನದ ಹೇಳಿಕೆಗಳನ್ನು ತಿರಸ್ಕರಿಸಿದೆ. 'ನಾವು ಆ ಸ್ಥಳಗಳಲ್ಲಿ ಸಭೆಗಳನ್ನು ನಡೆಸುವುದನ್ನು ತಪ್ಪಿಸಿದ್ದರೆ ಚೀನಾದ ಪ್ರಶ್ನೆ ಮಾನ್ಯವಾಗಿರುತ್ತದೆ. ನಮ್ಮದು ವಿಶಾಲ, ಸುಂದರ ಮತ್ತು ವೈವಿಧ್ಯಮಯ ರಾಷ್ಟ್ರ. ಜಿ 20 ಸಭೆಗಳು ನಡೆಯುತ್ತಿರುವಾಗ, ನಮ್ಮ ದೇಶದ ಪ್ರತಿಯೊಂದು ಭಾಗದಲ್ಲೂ ಸಭೆಗಳು ನಡೆಯುವುದು ಸಹಜ ಅಲ್ಲವೇ' ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮೋದಿ ಹೇಳಿದ್ದಾರೆ.

ಭಾರತ ಮೇ 22 ರಿಂದ ಮೂರು ದಿನಗಳ ಕಾಲ ಪ್ರವಾಸೋದ್ಯಮದ ಮೂರನೇ ಜಿ 20 ವರ್ಕಿಂಗ್ ಗ್ರೂಪ್ ಸಭೆಯನ್ನು ಶ್ರೀನಗರದಲ್ಲಿ ನಡೆಸಿತ್ತು. ಚೀನಾವನ್ನು ಹೊರತುಪಡಿಸಿ ಎಲ್ಲಾ ಜಿ-20 ದೇಶಗಳ ಪ್ರತಿನಿಧಿಗಳು ಈ ಕಾರ್ಯಕ್ರಮಕ್ಕಾಗಿ ಸುಂದರವಾದ ಕಣಿವೆಗೆ ಭೇಟಿ ನೀಡಿದ್ದರು. ಇದಷ್ಟೇ ಅಲ್ಲದೇ ಅರುಣಾಚಲ ಪ್ರದೇಶದಲ್ಲಿ ಮಾರ್ಚ್ ನಲ್ಲಿ ನಡೆದ ಜಿ-20 ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿನಿಧಿಗಳು ಭೇಟಿ ನೀಡಿದ್ದರು. 

ಚೀನಾದ ಹೇಳಿಕೆಗಳನ್ನು ತಳ್ಳಿಹಾಕಿರುವ ಭಾರತ, ತನ್ನ ಸ್ವಂತ ಪ್ರದೇಶದಲ್ಲಿ ಸಭೆಗಳನ್ನು ನಡೆಸುವುದಕ್ಕೆ ತಾನು ಸ್ವತಂತ್ರವಾಗಿದೆ ಎಂದು ಹೇಳಿದೆ. ಭಾರತದ ಜಿ 20 ಅಧ್ಯಕ್ಷತೆಯ ಅವಧಿ ಮುಗಿಯುವ ವೇಳೆಗೆ, ಎಲ್ಲಾ 28 ರಾಜ್ಯಗಳು ಮತ್ತು ಎಂಟು ಕೇಂದ್ರಾಡಳಿತ ಪ್ರದೇಶಗಳ 60 ನಗರಗಳಲ್ಲಿ 220 ಕ್ಕೂ ಹೆಚ್ಚು ಸಭೆಗಳು ನಡೆಯಲಿವೆ ಮತ್ತು ಸುಮಾರು 125 ರಾಷ್ಟ್ರಗಳಿಂದ ಒಂದು ಲಕ್ಷಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಹಾಗೂ  ಭಾರತೀಯರ ಕೌಶಲ್ಯಗಳನ್ನು ವೀಕ್ಷಿಸುತ್ತಾರೆ.

SCROLL FOR NEXT