ದೇಶ

ಒಂದು ದೇಶ ಒಂದು ಚುನಾವಣೆ: ಇವಿಎಂಗಳಿಗೆ ತಗುಲುವ ಖರ್ಚು ಎಷ್ಟು ಗೊತ್ತೇ? ಆಯೋಗದ ಅಂದಾಜು ಹೀಗಿದೆ...

Srinivas Rao BV

ನವದೆಹಲಿ: ದೇಶಾದ್ಯಂತ ಈಗ ಒಂದು ದೇಶ, ಒಂದು ಚುನಾವಣೆ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಪರಿಕಲ್ಪನೆ ಜಾರಿಯಾದಲ್ಲಿ ದೇಶಾದ್ಯಂತ ಒಟ್ಟಿಗೆ ಚುನಾವಣೆಗಳು ನಡೆದರೆ ಇವಿಎಂ ಗಳು ಬೃಹತ್ ಪ್ರಮಾಣದಲ್ಲಿ ಬಳಕೆಯಾಗುತ್ತವೆ. ಇದಕ್ಕಾಗಿ ಹೆಚ್ಚಿನ ಇವಿಎಂಗಳ ಅವಶ್ಯಕತೆ ಇರಲಿದೆ. 

ದೇಶಾದ್ಯಂತ ಏಕ ಕಾಲಕ್ಕೆ ನಡೆದರೆ ಇವಿಎಂಗಳನ್ನು ಹೊಂದಿಸುವುದಕ್ಕೆ ಹೆಚ್ಚಿನ ಯಂತ್ರಗಳನ್ನು ಖರೀದಿಸಬೇಕಾಗುತ್ತದೆ. 2015 ರಲ್ಲಿ ಚುನಾವಣಾ ಆಯೋಗ ಇದಕ್ಕಾಗಿ ನೀಡಿದ್ದ ಅಂದಾಜು ವೆಚ್ಚ 9,300 ಕೋಟಿ ರೂಪಾಯಿಗಳಾಗಿತ್ತು! 

ಲೋಕಸಭಾ ಚುನಾವಣೆ, ರಾಜ್ಯ ಚುನಾವಣೆ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಏಕ ಕಾಲಕ್ಕೆ ನಡೆಸಿದರೆ ಅದಕ್ಕೆ ಅಗತ್ಯವಿರುವ ಪರಿಕರಗಳು ಹಾಗೂ ಮಾನವಶಕ್ತಿಯ ಬಗ್ಗೆ ಪರಿಶೀಲನೆ ಮಾಡುವುದೂ ಸಹ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಸಮಿತಿಯ ಉದ್ದೇಶವಾಗಿದೆ. 

ಏಕಕಾಲಕ್ಕೆ ಚುನಾವಣೆ ನಡೆಸುವುದಕ್ಕೆ ಅಗತ್ಯವಿರುವ ಹೆಚ್ಚುವರಿ ಇವಿಎಂ ಗಳು ಹಾಗೂ ಸಿಬ್ಬಂದಿಗಳ ಅಗತ್ಯತೆಯ ಬಗ್ಗೆ ಸಮಿತಿ ಪರಿಶೀಲನೆ ನಡೆಸಲಿದೆ.

ಡಿಸೆಂಬರ್ 2015 ರಲ್ಲಿ 'ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಸಾಧ್ಯತೆ' ಕುರಿತು ವರದಿಯೊಂದಿಗೆ ಹೊರಬಂದ ಕಾನೂನು ಮತ್ತು ಸಿಬ್ಬಂದಿಗಳ ಇಲಾಖೆ ಸಂಬಂಧಿತ ಸ್ಥಾಯಿ ಸಮಿತಿ ಈ ವಿಷಯದ ಬಗ್ಗೆ ಇಸಿ ನೀಡಿದ ಸಲಹೆಗಳನ್ನು ಉಲ್ಲೇಖಿಸಿತ್ತು.

ಏಕಕಾಲಕ್ಕೆ ಚುನಾವಣೆ ನಡೆಸುವಾಗ ಎದುರಾಗಬಹುದಾದ ತೊಂದರೆಗಳನ್ನು ಚುನಾವಣಾ ಆಯೋಗವು ಉಲ್ಲೇಖಿಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಪ್ರಮುಖ ಸಮಸ್ಯೆ ಎಂದರೆ,  ಅದು ಬೃಹತ್ ಪ್ರಮಾಣದಲ್ಲಿ ಇವಿಎಂ ಹಾಗೂ ವಿವಿಪ್ಯಾಟ್ ಗಳ ಖರೀದಿಯಾಗಿದೆ. 2015 ರ ಅಂದಾಜಿನ ಪ್ರಕಾರ ಇದಕ್ಕಾಗಿ 9284.15 ಕೋಟಿ ಖರ್ಚಾಗಲಿದೆ. 

ಒಂದು ಇವಿಎಂ 15 ವರ್ಷಗಳ ಕಾಲ ಬಾಳಿಕೆ ಬರಲಿದ್ದು, ಈ ಅವಧಿಯಲ್ಲಿ ಯಂತ್ರಗಳನ್ನು ಬದಲಾಯಿಸಬೇಕಾಗುತ್ತದೆ. ಇದು ಮತ್ತೊಂದು ಹೆಚ್ಚುವರಿ ಖರ್ಚಾಗಿರಲಿದೆ. ಇದಷ್ಟೇ ಅಲ್ಲದೇ ಈ ಯಂತ್ರಗಳನ್ನು ನಿಭಾಯಿಸುವುದಕ್ಕೆ ಅಗತ್ಯವಿರುವ ಗೋದಾಮಿಗೂ ವೆಚ್ಚ ಎದುರಾಗಲಿದೆ ಎಂದು ಸ್ಥಾಯಿಸಮಿತಿ ವರದಿ ಹೇಳಿತ್ತು. 

SCROLL FOR NEXT