ದೇಶ

ಸನಾತನ ಧರ್ಮ ನಿರ್ಮೂಲನೆ ಹೇಳಿಕೆ: ಬಿಹಾರದ ಕೋರ್ಟ್ ನಲ್ಲಿ ಸ್ಟಾಲಿನ್, ಉದಯನಿಧಿ ಸ್ಟಾಲಿನ್ ವಿರುದ್ಧ ದೂರು ದಾಖಲು

Nagaraja AB

ಮುಜಾಫರ್‌ಪುರ: ಸನಾತನ ಧರ್ಮ ಕುರಿತು ವಿವಾದಾತ್ಮಕ ಹೇಳಿಕೆ ಹಿನ್ನೆಲೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಮತ್ತು ಅವರ ಪುತ್ರ ಉದಯನಿಧಿ ಸ್ಟಾಲಿನ್ ವಿರುದ್ಧ ಬಿಹಾರದ ನ್ಯಾಯಾಲಯವೊಂದರಲ್ಲಿ ಸೋಮವಾರ ದೂರು ದಾಖಲಿಸಲಾಗಿದೆ. 

ಮುಜಾಫರ್‌ಪುರ ಮೂಲದ ವಕೀಲ ಸುಧೀರ್‌ ಕುಮಾರ್‌ ಓಜಾ, ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್‌ ಪಂಕಜ್‌ ಕುಮಾರ್‌ ಲಾಲ್‌ ಅವರ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದು,  ಈ ಹೇಳಿಕೆಗಳು ಹಿಂದೂ ಭಾವನೆಗಳಿಗೆ ಧಕ್ಕೆ ತಂದಿವೆ ಎಂದು ಆರೋಪಿಸಿದ್ದಾರೆ.

ರಾಜಕೀಯ ದಿಗ್ಗಜರು ಮತ್ತು ಇತರ ಸೆಲೆಬ್ರಿಟಿಗಳ ವಿರುದ್ಧದ ದೂರುಗಳಿಗಾಗಿ ಸುದ್ದಿಯಲ್ಲಿರುವ ಓಜಾ, ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳ ಅಡಿಯಲ್ಲಿ ತಮಿಳುನಾಡು ಸಿಎಂ ಮತ್ತು ಕ್ಯಾಬಿನೆಟ್ ಸಚಿವರೂ ಆಗಿರುವ ಅವರ ಪುತ್ರನನ್ನು ವಿಚಾರಣೆಗೆ ಒಳಪಡಿಸುವಂತೆ ಕೋರಿದ್ದಾರೆ. ಈ ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್ 14 ಕ್ಕೆ ಮುಂದೂಡಲಾಗಿದೆ.

ಡಿಎಂಕೆ ಯುವ ಘಟಕದ ಕಾರ್ಯದರ್ಶಿ ಮತ್ತು ತಮಿಳುನಾಡು ಯುವ ಕಲ್ಯಾಣ ಸಚಿವ ಉದಯನಿಧಿ ಸ್ಟಾಲಿನ್ , ಸನಾತನ ಧರ್ಮ ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ ಎಂದು ಶನಿವಾರ ಆರೋಪಿಸಿದ್ದರು. ಅಲ್ಲದೇ,  ಅದನ್ನು ಕೊರೊನಾವೈರಸ್, ಮಲೇರಿಯಾ, ಡೆಂಗ್ಯೂ ವೈರಸ್ ಮತ್ತು ಸೊಳ್ಳೆಗಳಿಂದ ಉಂಟಾಗುವ ಜ್ವರಕ್ಕೆ ಹೋಲಿಸಿದ್ದರು.

ಉದಯ್ ಸ್ಟಾಲಿನ್ ಅವರ ಹೇಳಿಕೆಗೆ ದೇಶಾದ್ಯಂತ ಬಿಜೆಪಿಯಿಂದ ತೀವ್ರ ಟೀಕೆಗಳು ವ್ಯಕ್ತವಾಗುತ್ತಿದೆ. ಕೆಲವು ನಾಯಕರು ಇದು ನರಮೇಧದ ಕರೆ ಎಂದು ಆರೋಪಿಸಿದ್ದರೆ, ಮತ್ತೆ ಕೆಲವರರು ಉದಯನಿಧಿ ವಿರುದ್ಧ ದೇಶದ್ರೋಹದ ಮೊಕದ್ದಮೆ ದಾಖಲಿಸಬೇಕೆಂದು ಒತ್ತಾಯಿಸಿದ್ದಾರೆ. 

SCROLL FOR NEXT