ದೇಶ

‘ಕಳೆದ 9 ವರ್ಷಗಳಲ್ಲಿ ಪ್ರಧಾನಿ ಮೋದಿ ಒಂದೇ ಒಂದು ರಜೆಯನ್ನೂ ಪಡೆದಿಲ್ಲ’: ಆರ್‌ಟಿಐ ಪ್ರಶ್ನೆಗೆ ಪಿಎಂಒ ಉತ್ತರ

Ramyashree GN

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು 2014ರ ಮೇನಲ್ಲಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಒಂಬತ್ತು ವರ್ಷಗಳಲ್ಲಿ ಒಂದೇ ಒಂದು ರಜೆಯನ್ನು ತೆಗೆದುಕೊಂಡಿಲ್ಲ ಎಂದು ಆರ್‌ಟಿಐ ಪ್ರಶ್ನೆಯೊಂದಕ್ಕೆ ಪಿಎಂಒ ಪ್ರತಿಕ್ರಿಯಿಸಿದೆ.

ಪ್ರಫುಲ್ ಪಿ. ಸರ್ದಾ ಎಂಬುವವರು ಸಲ್ಲಿಸಿರುವ ಮಾಹಿತಿ ಹಕ್ಕು ಅಧಿನಿಯಮದಡಿ (ಆರ್‌ಟಿಐ) ಅರ್ಜಿ ಸಲ್ಲಿಸಿದ್ದು, ಪ್ರಧಾನ ಮಂತ್ರಿ ಕಚೇರಿಗೆ ಎರಡು ಪ್ರಶ್ನೆಗಳನ್ನು ಕೇಳಿದ್ದರು.

ಮೊದಲನೆ ಪ್ರಶ್ನೆ: 2014ರಲ್ಲಿ ಭಾರತದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಪ್ರಧಾನಿ ಮೋದಿ ಎಷ್ಟು ದಿನ ಕಚೇರಿಗೆ ಹಾಜರಾಗಿದ್ದಾರೆ?

ಇದಕ್ಕೆ ಉತ್ತರಿಸಿರುವ ಪಿಎಂಒ, ಪ್ರಧಾನಿ ನರೇಂದ್ರ ಮೋದಿಯವರು ಎಲ್ಲಾ ಸಮಯದಲ್ಲೂ ಕರ್ತವ್ಯ ನಿರ್ವಹಿಸಿದ್ದಾರೆ. ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರದಲ್ಲಿ ಯಾವುದೇ ರಜೆ ಪಡೆದಿಲ್ಲ ಎಂದಿದೆ.

ಎರಡನೇ ಪ್ರಶ್ನೆ: ಪ್ರಧಾನಿಯವರು ಅಧಿಕಾರ ವಹಿಸಿಕೊಂಡ ನಂತರ ಹಾಜರಿದ್ದ ದಿನಗಳ ಸಂಖ್ಯೆ ಮತ್ತು ವಿವಿಧ ಕಾರ್ಯಕ್ರಮಗಳು ಮತ್ತು ಸಮಾರಂಭಗಳ ವಿವರಗಳನ್ನು ಕೇಳಿದ್ದಾರೆ.

ಎರಡನೇ ಪ್ರಶ್ನೆಗೆ ಉತ್ತರಿಸಿರುವ ಪಿಎಂಒ, ಪಿಎಂಒದ ವೆಬ್‌ಸೈಟ್ ಲಿಂಕ್ ಅನ್ನು ಹಂಚಿಕೊಂಡಿದೆ. ಇದು ಮೇ 2014ರಲ್ಲಿ ಮೋದಿ ಪ್ರಧಾನಿಯಾದ ನಂತರ ದೇಶ ಮತ್ತು ವಿದೇಶಗಳಲ್ಲಿ ಸುಮಾರು 3,000 ಕ್ಕೂ ಅಧಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ ಎಂದಿದೆ. 
ಆರ್‌ಟಿಐ ಅರ್ಜಿ ಸ್ವೀಕೃತಿಯ ದಿನಾಂಕವನ್ನು ಜುಲೈ 31, 2023 ಎಂದು ನಮೂದಿಸಲಾಗಿದೆ.

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಸೋಮವಾರ ತಮ್ಮ ಸಾಮಾಜಿಕ ಮಾಧ್ಯಮ ಖಾತೆ ಟ್ವಿಟರ್‌ನಲ್ಲಿ ಆ ಆರ್‌ಟಿಐನ ಪ್ರತಿಯನ್ನು ಹಂಚಿಕೊಂಡಿದ್ದಾರೆ.

SCROLL FOR NEXT