ದೇಶ

'ಧಾರ್ಮಿಕ ಭಾವನೆಗಳಿಗೆ ಧಕ್ಕೆ': ಉದಯನಿಧಿ ಸ್ಟಾಲಿನ್, ಪ್ರಿಯಾಂಕ್ ಖರ್ಗೆ ವಿರುದ್ಧ ಪ್ರಕರಣ ದಾಖಲು

Ramyashree GN

ರಾಂಪುರ: ಧಾರ್ಮಿಕ ಭಾವನೆಗಳಿ ಧಕ್ಕೆ ಉಂಟುಮಾಡಿದ ಆರೋಪದ ಮೇಲೆ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ವಿರುದ್ಧ ಇಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. 

ಸನಾತನ ಧರ್ಮವನ್ನು ನಿರ್ಮೂಲನೆ ಮಾಡಲು ಸ್ಟಾಲಿನ್ ಕರೆ ನೀಡಿದ್ದಕ್ಕಾಗಿ ಮತ್ತು ಅವರ ಹೇಳಿಕೆಯನ್ನು ಬೆಂಬಲಿಸಿದ್ದಕ್ಕಾಗಿ ಖರ್ಗೆ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದರು.

ಮಂಗಳವಾರ ಇಲ್ಲಿನ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ಐಪಿಸಿ ಸೆಕ್ಷನ್ 295 ಎ (ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು) ಮತ್ತು 153 ಎ (ವಿವಿಧ ಧಾರ್ಮಿಕ ಗುಂಪುಗಳ ನಡುವೆ ದ್ವೇಷ ಉತ್ತೇಜನೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ವಕೀಲರಾದ ಹರ್ಷಗುಪ್ತಾ ಮತ್ತು ರಾಮ್ ಸಿಂಗ್ ಲೋಧಿ ಅವರ ದೂರಿನ ಮೇರೆಗೆ ಎಫ್‌ಐಆರ್ ದಾಖಲಾಗಿದೆ. ಅವರು ರಾಜಕಾರಣಿಗಳ ಹೇಳಿಕೆಗಳು ತಮ್ಮ ಭಾವನೆಗಳಿಗೆ ಧಕ್ಕೆ ತಂದಿವೆ ಎಂದು ಆರೋಪಿಸಿ ಸ್ಟಾಲಿನ್ ಅವರ ಹೇಳಿಕೆಯ ಬಗ್ಗೆ ಮಾಧ್ಯಮ ವರದಿಗಳನ್ನು ಹೈಲೈಟ್ ಮಾಡಿದ್ದಾರೆ.

'ಸನಾತನ ಧರ್ಮ' ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ. ಸನಾತನ ಧರ್ಮವನ್ನು ವಿರೋಧಿಸುವ ಬದಲು ಅದನ್ನು ನಿರ್ಮೂಲನೆ ಮಾಡಬೇಕು ಎಂದು ತಮಿಳುನಾಡು ಯುವ ಕಲ್ಯಾಣ ಸಚಿವ ಉದಯನಿಧಿ ಸ್ಟಾಲಿನ್ ಸೆಪ್ಟಂಬರ್ 2ರಂದು ಹೇಳಿದ್ದಾರೆ.

'ಕೆಲವು ವಿಷಯಗಳನ್ನು ವಿರೋಧಿಸಲು ಸಾಧ್ಯವಿಲ್ಲ. ಅವುಗಳನ್ನು ನಿರ್ಮೂಲನೆ ಮಾಡಬೇಕು. ನಾವು ಡೆಂಗ್ಯು, ಮಲೇರಿಯಾ ಅಥವಾ ಕೊರೊನಾವೈರಸ್ ಅನ್ನು ವಿರೋಧಿಸಲು ಸಾಧ್ಯವಿಲ್ಲ. ಬದಲಿಗೆ ನಾವು ಅವುಗಳನ್ನು ನಿರ್ಮೂಲನೆ ಮಾಡಬೇಕು. ಅದೇ ರೀತಿ ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂದು ಅವರು ಶನಿವಾರ ಹೇಳಿದ್ದಾರೆ.

SCROLL FOR NEXT