ದೇಶ

ನಮ್ಮ ಧರ್ಮಕ್ಕೆ ಯಾರೂ ಸವಾಲು ಹಾಕಲು ಸಾಧ್ಯವಿಲ್ಲ: ಸ್ಮೃತಿ ಇರಾನಿ

Nagaraja AB

ನವದೆಹಲಿ: ಸನಾತನ ಧರ್ಮ ಕುರಿತ ಡಿಎಂಕೆ ನಾಯಕ ಮತ್ತು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಯನ್ನು ತೀವ್ರವಾಗಿ ತೀವ್ರವಾಗಿ ಟೀಕಿಸಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಶ್ರೀಕೃಷ್ಣನಿಗಾಗಿ ಹೇಳುವ ಘೋಷಣೆಗಳು ಸನಾತನ ಧರ್ಮಕ್ಕೆ ಸವಾಲೆಸೆಯುವವರನ್ನು ತಲುಪುವಷ್ಟು ಜೋರಾಗಿರಬೇಕು ಎಂದಿದ್ದಾರೆ. 

ದ್ವಾರಕಾದಲ್ಲಿ ನಡೆದ ಕೃಷ್ಣ ಜನ್ಮಾಷ್ಟಮಿ ಆಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಸ್ಮೃತಿ ಇರಾನಿ, ಸನಾತನ ಧರ್ಮಕ್ಕೆ ಸವಾಲೆಸೆದವರಿಗೆ ನಮ್ಮ ಧ್ವನಿ ತಲುಪಬೇಕು. ಭಕ್ತರು ಬದುಕಿರುವವರೆಗೂ ನಮ್ಮ ಧರ್ಮ ಮತ್ತು ನಂಬಿಕೆಗೆ ಯಾರೂ ಸವಾಲು ಹಾಕಲು ಸಾಧ್ಯವಿಲ್ಲ ಎಂದರು. 

ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಸಂಪುಟ ಸಚಿವರ ಜತೆಗಿನ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದರು. ಸನಾತನ ಧರ್ಮದ ಚರ್ಚೆಗೆ ಸಚಿವರು ತಕ್ಕ ಉತ್ತರ ನೀಡಬೇಕು ಮತ್ತು ವಿರೋಧಿಗಳನ್ನು ಎದುರಿಸಲು ಸತ್ಯಾಂಶಗಳನ್ನು ಬಳಸಬೇಕು ಎಂದು ಪ್ರಧಾನಿ ಹೇಳಿರುವುದಾಗಿ ಮೂಲಗಳು ತಿಳಿಸಿವೆ. 

ತಮಿಳುನಾಡು ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ ಮತ್ತು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ವಿರುದ್ಧ "ಧಾರ್ಮಿಕ ಭಾವನೆಗಳಿಗೆ ಧಕ್ಕೆ" ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಉತ್ತರ ಪ್ರದೇಶದ ರಾಂಪುರದಲ್ಲಿ ಇಬ್ಬರು ವಕೀಲರು ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಲಾಗಿದೆ. ಉದಯನಿಧಿಯವರ ಹೇಳಿಕೆ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸುತ್ತಿದ್ದು, ಡಿಎಂಕೆ ಮತ್ತು ತಮಿಳುನಾಡಿನಲ್ಲಿ ಅದರ ಪಾಲುದಾರ ಪಕ್ಷವಾದ ಕಾಂಗ್ರೆಸ್ ಸನಾತನ ಧರ್ಮದ ನಿರ್ಮೂಲನೆಯನ್ನು ಪ್ರತಿಪಾದಿಸುತ್ತಿವೆ ಎಂದು ಆರೋಪಿಸಿದೆ.

SCROLL FOR NEXT