ಭುವನೇಶ್ವರ: ಮುಂಬರುವ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯನ್ನು ಮುಂದೂಡುವುದಕ್ಕಾಗಿಯೇ ಕೇಂದ್ರ ಸರ್ಕಾರ 'ಒಂದು ರಾಷ್ಟ್ರ, ಒಂದು ಚುನಾವಣೆಗಾಗಿ ಪ್ರಚಾರ ಮಾಡುತ್ತಿದೆ ಎಂದು ಖ್ಯಾತ ಸುಪ್ರೀಂ ಕೋರ್ಟ್ ವಕೀಲ ಮತ್ತು ಸಾಮಾಜಿಕ ಹೋರಾಟಗಾರ ಪ್ರಶಾಂತ್ ಭೂಷಣ್ ಆರೋಪಿಸಿದ್ದಾರೆ. ಈ ವರ್ಷಾಂತ್ಯದಲ್ಲಿ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ, ತೆಲಂಗಾಣ ಮತ್ತು ಮಿಜೋರಾಂನಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ.
ಭಾನುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಶಾಂತ್ ಭೂಷಣ್, ಭಾರತದಂತಹ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಒಂದು ರಾಷ್ಟ್ರ ಒಂದು ಚುನಾವಣೆ ಕಾರ್ಯಗತಗೊಳಿಸಲು ಸಾಧ್ಯವಿಲ್ಲ, ಏಕೆಂದರೆ ನಮ್ಮ ವ್ಯವಸ್ಥೆಯಲ್ಲಿ ಸರ್ಕಾರವು ಬಹುಮತ ಕಳೆದುಕೊಂಡಾಗ ಮತ್ತು ಹೊಸ ಸರ್ಕಾರ ರಚನೆಯಾದಾಗ ಮಧ್ಯಂತರದಲ್ಲಿ ಬೀಳಬಹುದು. ಆದಾಗ್ಯೂ, ಒಂದು ರಾಷ್ಟ್ರ ಒಂದು ಚುನಾವಣೆ ಜಾರಿಯಾದರೆ, ಇಂತಹ ಪರಿಸ್ಥಿತಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗುವುದು, ಇದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ ಎಂದು ಅವರು ಪ್ರತಿಪಾದಿಸಿದರು.
ಇದನ್ನೂ ಓದಿ: ಒಂದು ರಾಷ್ಟ್ರ, ಒಂದು ಚುನಾವಣೆ: ಕರ್ನಾಟಕ ಚುನಾವಣೆ ಕಾರಣವೇ? ಜೂನ್ನಲ್ಲಿಯೇ ಸಿದ್ಧತಾ ಕಾರ್ಯ ಆರಂಭಿಸಿದ್ದ ಕೋವಿಂದ್!
ಅಂದರೆ ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ರಾಷ್ಟ್ರಪತಿ ಆಡಳಿತ ವ್ಯವಸ್ಥೆಗೆ ಬದಲಾಗುತ್ತೀವಿ. ಹಾಗಾಗಿ ಇದು ಸಂಸದೀಯ ಪ್ರಜಾಪ್ರಭುತ್ವದ ಸಂಪೂರ್ಣ ಉಲ್ಲಂಘನೆಯಾಗುತ್ತದೆ. ನನ್ನ ದೃಷ್ಟಿಯಲ್ಲಿ ಈ ಬಗ್ಗೆ ಸರ್ಕಾರಕ್ಕೆ ಸ್ಪಷ್ಟವಾಗಿ ಅರಿವಿದೆ. ರಾಷ್ಟ್ರಪತಿ ಆಡಳಿತ ವ್ಯವಸ್ಥೆಗೆ ಬದಲಾಯಿಸಲು ಸಂವಿಧಾನದಲ್ಲಿ ಹಲವಾರು ತಿದ್ದುಪಡಿಗಳ ಅಗತ್ಯವಿದೆ ಎಂಬುದನ್ನು ಅವರು ತಿಳಿದಿದ್ದಾರೆ ಎಂದರು.
ಈಗಿನ ಸರ್ಕಾರಕ್ಕೆ ರಾಜ್ಯಸಭೆಯಲ್ಲಿ ಬಹುಮತವಿಲ್ಲ .ಈ ಎಲ್ಲ ಸಂಗತಿಗಳನ್ನು ಸರ್ಕಾರ ತಿಳಿದಿದೆ. ಆದರೂ, ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ, ತೆಲಂಗಾಣ ಮತ್ತು ಮಿಜೋರಾಂ ರಾಜ್ಯಗಳ ಚುನಾವಣೆಯನ್ನು ಮುಂದೂಡುವ ಒಂದೇ ಒಂದು ಉದ್ದೇಶದಿಂದ ಅವರು ಒಂದು ರಾಷ್ಟ್ರ ಒಂದು ಚುನಾವಣೆಯನ್ನು ಪ್ರಚಾರಗೊಳಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.
"ಈ ಐದು ರಾಜ್ಯಗಳಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ಸೋಲಿನ ಭೀತಿಯಲ್ಲಿದೆ. ಹಾಗಾಗಿ, ಅವರು ಒಂದು ರಾಷ್ಟ್ರ ಒಂದು ಚುನಾವಣೆ ಹೆಸರಿನಲ್ಲಿ 2024 ರ ಲೋಕಸಭಾ ಚುನಾವಣೆಯವರೆಗೂ ವಿಧಾನಸಭಾ ಚುನಾವಣೆಯನ್ನು ಮುಂದೂಡಲು ಹೊರಟಿದ್ದಾರೆ .ಆ ರಾಜ್ಯಗಳಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗುವುದು ಅವರು ಹೇಳಿದರು.