ದೇಶ

ಮೂಲಸೌಕರ್ಯ ಕೊರತೆಯಿಂದ ರೊಚ್ಚಿಗೆದ್ದ ಶಾಲಾ ವಿದ್ಯಾರ್ಥಿನಿಯರು, ಬಿಇಒ ಕಾರು ಧ್ವಂಸ- ವಿಡಿಯೋ

Nagaraja AB

ವೈಶಾಲಿ: ಶಾಲೆಯಲ್ಲಿ ಮೂಲಸೌಕರ್ಯ ಕೊರತೆ ಹಾಗೂ ಸರಿಯಾದ ಆಸನ ವ್ಯವಸ್ಥೆ ಇಲ್ಲದ್ದಕ್ಕೆ ರೊಚ್ಚಿಗೆದ್ದ ವಿದ್ಯಾರ್ಥಿನಿಯರು ಬಿಇಒ ಕಾರಿಗೆ ದೊಣ್ಣೆ ಹಾಗೂ ಕಲ್ಲುಗಳಿಂದ ಹೊಡೆದು ಧ್ವಂಸಗೊಳಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಶಿಕ್ಷಣ ಅಧಿಕಾರಿಯ ಕಾರನ್ನು ಸುತ್ತುವರೆದಿರುವ ವಿದ್ಯಾರ್ಥಿನಿಯರು ಅದರ ಮೇಲೆ ಕಲ್ಲನ್ನು ಎಸೆಯುವ ದೃಶ್ಯ ವಿಡಿಯೋದಲ್ಲಿದೆ. 

ಅಂದಹಾಗೆ ಬಿಹಾರದ ವೈಶಾಲಿ ಜಿಲ್ಲೆಯ ಮಹನಾರ್ ನಲ್ಲಿರುವ ಬಾಲಕಿಯರ ಪ್ರೌಢಶಾಲೆಯಲ್ಲಿ ಮಂಗಳವಾರ ಕಳಪೆ ಮೂಲಸೌಕರ್ಯ ವ್ಯವಸ್ಥೆ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ. ಪ್ರತಿಭಟನೆ ಸುದ್ದಿ ತಿಳಿದು ಸ್ಥಳಕ್ಕೆ ಬಂದ ಬ್ಲಾಕ್ ಶಿಕ್ಷಣಾಧಿಕಾರಿ ಅಹಲ್ಯಾ ಕುಮಾರ್ ಅವರ ಕಾರನ್ನು ವಿದ್ಯಾರ್ಥಿನಿಯರು ಧ್ವಂಸಗೊಳಿಸಿದ್ದಾರೆ.  ತರಗತಿಗಳಲ್ಲಿ ಕೂರಲು ಯಾವುದೇ ಬೆಂಚು ಅಥವಾ ಟೇಬಲ್‌ಗಳಿಲ್ಲ ಎಂದು ಪ್ರತಿಭಟನಾನಿರತ ವಿದ್ಯಾರ್ಥಿನಿಯರು ಹೇಳಿದ್ದಾರೆ.

ಈ ಮಧ್ಯೆ ಆಡಳಿತ, ಮಹಿಳಾ ಪೊಲೀಸರು ಕೆಲವು ವಿದ್ಯಾರ್ಥಿನಿಯರಿಗೆ ಕಪಾಳಮೋಕ್ಷ ಮಾಡಿದ್ದರಿಂದ ಕೆರಳಿದ ಪ್ರತಿಭಟನಾಕಾರರು ಶಿಕ್ಷಣಾಧಿಕಾರಿ ಕಾರನ್ನು ಧ್ವಂಸಗೊಳಿಸಿದರು ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. 

ಘಟನೆಯ ಕುರಿತು ಪ್ರತಿಕ್ರಿಯಿಸಿದ ಮಹನಾರ್‌ನ ಎಸ್‌ಡಿಒ ನೀರಜ್ ಕುಮಾರ್, ಶಾಲೆಯಲ್ಲಿ ಹೆಚ್ಚಿನ ಸಂಖ್ಯೆಯ ಪ್ರವೇಶದಿಂದಾಗಿ ಮೂಲಸೌಕರ್ಯ ಕೊರತೆ ಉಂಟಾಗಿದೆ. ಒಳಗೆ ಕುಳಿತುಕೊಳ್ಳಲು ಸ್ಥಳ ಸಿಗದ ವಿದ್ಯಾರ್ಥಿಗಳು ಹೊರಗೆ ಬಂದು ರಸ್ತೆ ತಡೆ ನಡೆಸಿದರು. ಎರಡು ಪಾಳಿಯಲ್ಲಿ ಶಾಲೆಯನ್ನು ನಡೆಸಲು ಪ್ರಯತ್ನಿಸುತ್ತಿದ್ದೇವೆ ಎಂದು ಅವರು ಸುದ್ದಿ ಸಂಸ್ಥೆ ಎಎನ್ ಐಗೆ ತಿಳಿಸಿದ್ದಾರೆ.

SCROLL FOR NEXT