ದೇಶ

ಮೊದಲ ಸಮನ್ವಯ ಸಮಿತಿ ಸಭೆ ನಂತರ ಜಾತಿ ಗಣತಿಗೆ ಆಗ್ರಹಿಸಿದ INDIA

Lingaraj Badiger

ನವದೆಹಲಿ: ಅಕ್ಟೋಬರ್ ಮೊದಲ ವಾರದಲ್ಲಿ ವಿಧಾನಸಭೆ ಚುನಾವಣೆ ಎದುರಿಸಲಿರುವ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಮೊದಲ ಜಂಟಿ ಸಾರ್ವಜನಿಕ ಸಭೆ ನಡೆಸಲು ಪ್ರತಿಪಕ್ಷಗಳ ಮೈತ್ರಿಕೂಟ ಇಂಡಿಯಾ ಬುಧವಾರ ನಿರ್ಧರಿಸಿದೆ ಮತ್ತು ಸೀಟು ಹಂಚಿಕೆಯ ಮಾತುಕತೆಯನ್ನು ಶೀಘ್ರವಾಗಿ ಆರಂಭಿಸುವುದಾಗಿ ಹೇಳಿದೆ.

ಇಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ನಿವಾಸದಲ್ಲಿ ನಡೆದ INDIA ಮೈತ್ರಿಕೂಟದ ಮೊದಲ ಸಮನ್ವಯ ಸಮಿತಿ ಸಭೆಯಲ್ಲಿ ಬೆಲೆ ಏರಿಕೆ, ನಿರುದ್ಯೋಗ, ಭ್ರಷ್ಟಾಚಾರ ಮತ್ತು ಜಾತಿ ಗಣತಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪ್ರಸ್ತಾಪಿಸುವುದಾಗಿ ಹೇಳಿದ್ದಾರೆ.

ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮದ ಕುರಿತು ನೀಡಿದ ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ ನಡೆದ ಈ ಸಭೆಯಲ್ಲಿ 14 ಸದಸ್ಯರ ಸಮಿತಿಯ 12 ನಾಯಕರು ಉಪಸ್ಥಿತರಿದ್ದರು.

ಜಾರಿ ನಿರ್ದೇಶನಾಲಯದ ಸಮನ್ಸ್‌ನಿಂದಾಗಿ ಟಿಎಂಸಿಯ ಅಭಿಷೇಕ್ ಬ್ಯಾನರ್ಜಿ ಸಭೆಗೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ಸಮಿತಿಯ ಸದಸ್ಯರಾಗಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಅವರು ತಿಳಿಸಿದ್ದಾರೆ.

ಇಡಿ ಸಮನ್ಸ್‌ ಬಿಜೆಪಿ ಮತ್ತು ಪ್ರಧಾನಿ ಮೋದಿಯ “ಸೇಡಿನ ರಾಜಕೀಯ” ಪರಿಣಾಮ ಎಂದು ಅವರು ಆರೋಪಿಸಿದ್ದಾರೆ.

“ಸಮನ್ವಯ ಸಮಿತಿಯು ಸೀಟು ಹಂಚಿಕೆ ಪ್ರಕ್ರಿಯೆಯನ್ನು ಪ್ರಾರಂಭಿಸಲು, ದೇಶದ ವಿವಿಧ ಭಾಗಗಳಲ್ಲಿ ಜಂಟಿ ಸಾರ್ವಜನಿಕ ಸಭೆಗಳನ್ನು ನಡೆಸಲು ಮತ್ತು ಜಾತಿ ಗಣತಿ ನಡೆಸುವಂತೆ ಒತ್ತಾಯಿಸಲು ನಿರ್ಧರಿಸಿದೆ ಎಂದು ಅವರು ಹೇಳಿದ್ದಾರೆ.

SCROLL FOR NEXT