ದೇಶ

ಮಣಿಪುರದಲ್ಲಿ ಸೇನಾ ಯೋಧನನ್ನು ಅಪಹರಿಸಿ ಹತ್ಯೆ

Lingaraj Badiger

ಇಂಫಾಲ್: ಮಣಿಪುರದ ಇಂಫಾಲ್ ಪೂರ್ವ ಜಿಲ್ಲೆಯ ಖುನಿಂಗ್‌ಥೆಕ್ ಗ್ರಾಮದಲ್ಲಿ ಭಾರತೀಯ ಸೇನೆಯ ಯೋಧನ ಶವ ಭಾನುವಾರ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
  
ಹುತಾತ್ಮ ಯೋಧನನ್ನು ಕಾಂಗ್‌ಪೊಕ್ಪಿ ಜಿಲ್ಲೆಯ ಲೀಮಾಖೋಂಗ್‌ನಲ್ಲಿ ಸೇನೆಯ ಡಿಫೆನ್ಸ್ ಸೆಕ್ಯುರಿಟಿ ಕಾರ್ಪ್ಸ್(ಡಿಎಸ್‌ಸಿ) ಸಿಪಾಯಿ ಸೆರ್ಟೊ ತಂಗ್‌ಥಾಂಗ್ ಕೋಮ್ ಎಂದು ಗುರುತಿಸಲಾಗಿದ್ದು, ಅವರು ಇಂಫಾಲ್ ಪಶ್ಚಿಮದ ತರುಂಗ್‌ನವರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಧಿಕಾರಿಗಳ ಪ್ರಕಾರ, ಶನಿವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಅಪರಿಚಿತ ಶಸ್ತ್ರಸಜ್ಜಿತ ವ್ಯಕ್ತಿಗಳು, ರಜೆಯಲ್ಲಿದ್ದ ಸಿಪಾಯಿ ಕೋಮ್ ಅವರನ್ನು ಅವರ ಮನೆಯಿಂದ ಅಪಹರಿಸಿದ್ದಾರೆ.

ಏಕೈಕ ಪ್ರತ್ಯಕ್ಷದರ್ಶಿಯಾಗಿರುವ ಯೋಧನ 10 ವರ್ಷದ ಮಗನ ಪ್ರಕಾರ, ನಾನು ಮತ್ತು ನನ್ನ ತಂದೆ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಮೂವರು ಪುರುಷರು ಮನೆಗೆ ಪ್ರವೇಶಿಸಿದರು.

"ಶಸ್ತ್ರಸಜ್ಜಿತ ವ್ಯಕ್ತಿಗಳು ನನ್ನ ತಂದೆ ತಲೆಗೆ ಪಿಸ್ತೂಲ್ ಇರಿಸಿ, ಬಿಳಿಯ ವಾಹನದಲ್ಲಿ ಬಲವಂತವಾಗಿ ಕರೆದೊಯ್ದರು" ಎಂದು ಅವರ ಮಗ ಹೇಳಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

"ಭಾನುವಾರ ಬೆಳಗ್ಗೆ ತನಕ ಸಿಪಾಯಿ ಕೋಮ್ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಬೆಳಗ್ಗೆ 9.30 ರ ಸುಮಾರಿಗೆ, ಇಂಫಾಲ್ ಪೂರ್ವದ ಖುನಿಂಗ್‌ಥೆಕ್ ಗ್ರಾಮದಲ್ಲಿ ಅವರ ಶವ ಪತ್ತೆಯಾಗಿದೆ. ಅವರ ಗುರುತನ್ನು ಅವರ ಸಹೋದರ ಮತ್ತು ಸೋದರ ಮಾವ ಖಚಿತಪಡಿಸಿದ್ದಾರೆ. ಸೈನಿಕನ ತಲೆಗೆ ಒಂದು ಗುಂಡಿನ ಗಾಯವಾಗಿತ್ತು," ಎಂದು ಅಧಿಕಾರಿಗಳು ಹೇಳಿದ್ದಾರೆ.

SCROLL FOR NEXT