ದೇಶ

ಸುಗ್ಗಿ ಹಬ್ಬದ ಕರ್ಮ ಪೂಜೆಗೆ ಮರಳು ತರಲು ಹೋದ ನಾಲ್ವರು ಬಾಲಕಿಯರು ಕೊಳದಲ್ಲಿ ಮುಳುಗಿ ಸಾವು, ಓರ್ವ ಬಾಲಕಿ ರಕ್ಷಣೆ!

Ramyashree GN

ರಾಂಚಿ: ಮಂಗಳವಾರ ಜಾರ್ಖಂಡ್‌ನ ಗಿರಿದಿಹ್‌ನಲ್ಲಿ ಸುಗ್ಗಿಯ ಹಬ್ಬದ ಕರ್ಮ ಪೂಜೆಗೆ ಮರಳು ತರಲೆಂದು ಹೊಂಡಕ್ಕೆ ತೆರಳಿದ್ದ ನಾಲ್ವರು ಬಾಲಕಿಯರು ನೀರಿನಲ್ಲಿ ಮುಳುಗಿ ಸಾವಿಗೀಡಾಗಿರುವ ದಾರುಣ ಘಟನೆ ನಡೆದಿದೆ.

ಪೊಲೀಸರ ಪ್ರಕಾರ, ಗಿರಿದಿಹ್‌ನ ಜಿಲ್ಲಾ ಕೇಂದ್ರದಿಂದ ಸುಮಾರು 6 ಕಿಮೀ ದೂರದ ಪಚಂಬಾ ಪೊಲೀಸ್ ಠಾಣಾ ವ್ಯಾಪ್ತಿಯ ಪೆಥಿಯಾತಂಡ್ ಗ್ರಾಮದಲ್ಲಿ ಕರ್ಮ ಪೂಜೆ ಆಚರಣೆಗೂ ಮುನ್ನ ಸ್ನಾನ ಮಾಡುವಾಗ ಅವರು ಸಾವಿಗೀಡಾಗಿದ್ದಾರೆ.

ಪೊಲೀಸರ ಪ್ರಕಾರ, ಅವರೆಲ್ಲರೂ 12 ರಿಂದ 15 ವರ್ಷದೊಳಗಿನವರು. ಮೃತ ಬಾಲಕಿಯರನ್ನು ಮಮತಾ ಕುಮಾರಿ (15), ದಿವ್ಯಾ ಕುಮಾರಿ (12), ಸೃಷ್ಟಿ ಕುಮಾರಿ (12) ಮತ್ತು ಸಂಧ್ಯಾ ಕುಮಾರಿ (14) ಎಂದು ಗುರುತಿಸಲಾಗಿದೆ.

ಹಂದಾಡಿ ಗ್ರಾಮದ ಬಾಲಕಿಯರ ಗುಂಪೊಂದು ಕರ್ಮ ಪೂಜೆಗೆಂದು ಸಮೀಪದ ಪೇಠಿಯಾತಂದ್ ಗ್ರಾಮದ ಹೊಂಡದಿಂದ ಮಣ್ಣು, ಮರಳು ತರಲು ಹೋಗಿತ್ತು. ಮಣ್ಣು ಮತ್ತು ಮರಳನ್ನು ಸಂಗ್ರಹಿಸುವ ಮೊದಲು, ಐವರು ಹುಡುಗಿಯರು ಸ್ನಾನ ಮಾಡಲೆಂದು ಕೊಳಕ್ಕೆ ಇಳಿದಿದ್ದರು. ಈ ಸಮಯದಲ್ಲಿ ಬಾಲಕಿಯೊಬ್ಬಳು ಆಳವಾದ ನೀರಿಗೆ ಜಾರಿದ್ದಾರೆ. ಆಕೆಯನ್ನು ರಕ್ಷಿಸುವ ಸಂದರ್ಭದಲ್ಲಿ ಇತರ ನಾಲ್ವರು ಕೂಡ ನೀರಿನಲ್ಲಿ ಮುಳುಗಿದ್ದಾರೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ರಾಣಾ ಹೇಳಿದ್ದಾರೆ.

ಆದಾಗ್ಯೂ, ಐದನೇ ಬಾಲಕಿಯನ್ನು ಗ್ರಾಮಸ್ಥರು ಸುರಕ್ಷಿತವಾಗಿ ರಕ್ಷಿಸಿದ್ದಾರೆ ಮತ್ತು ಗಂಭೀರ ಸ್ಥಿತಿಯಲ್ಲಿದ್ದ ಆಕೆಯನ್ನು ಸದರ್ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಅವರು ಹೇಳಿದರು.

ರಾಣಾ ಅವರ ಪ್ರಕಾರ, ಬಾಲಕಿಯರು ಮುಳುಗುತ್ತಿರುವುದನ್ನು ನೋಡಿ, ಅಲ್ಲಿದ್ದ ಇತರ ಹುಡುಗಿಯರು ಕಿರುಚಿಕೊಂಡಿದ್ದಾರೆ. ಈ ವೇಳೆ ಗ್ರಾಮಸ್ಥರು ತಕ್ಷಣ ಸ್ಥಳಕ್ಕೆ ತಲುಪಿದ್ದಾರೆ. ಆದರೆ, ಸ್ಥಳೀಯರು ರಕ್ಷಣೆ ಮಾಡುವ ಮುನ್ನವೇ ನಾಲ್ವರು ಸಾವಿಗೀಡಾಗಿದ್ದರು. 

SCROLL FOR NEXT