ದೇಶ

ದೆಹಲಿ ವಿವಿ ವಿದ್ಯಾರ್ಥಿ ಸಂಘದ ಚುನಾವಣೆ: ಎಬಿವಿಪಿಗೆ ಮೇಲುಗೈ, ಎನ್ ಎಸ್ ಯುಐಗೆ 1 ವಿಭಾಗದಲ್ಲಿ ಗೆಲುವು

Srinivas Rao BV

ನವದೆಹಲಿ: ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘ (ಡಿಯುಎಸ್ ಯು) ದ ನಾಲ್ಕು ಕೇಂದ್ರ ಸಮಿತಿಗಳ ಹುದ್ದೆಗಳಿಗೆ ನಡೆದ ಚುನಾವಣೆಯಲ್ಲಿ ಎಬಿವಿಪಿ ಮೇಲುಗೈ ಸಾಧಿಸಿದೆ. 

4 ಸಮಿತಿಗಳ ಹುದ್ದೆಗಳ ಪೈಕಿ 3 ರಲ್ಲಿ ಎಬಿವಿಪಿ ಗೆಲುವು ಸಾಧಿಸಿದ್ದರೆ, ಭಾರತದ ರಾಷ್ಟ್ರೀಯ ವಿದ್ಯಾರ್ಥಿಗಳ ಒಕ್ಕೂಟ (ಎನ್ ಎಸ್ ಯುಐ)  ಒಂದು ಸ್ಥಾನದಲ್ಲಿ ಗೆದ್ದಿದೆ. ಡಿಯುಎಸ್ ಯು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧ್ಸಿದ್ದ ಎನ್ ಎಸ್ ಯುಐ ನ ಹಿತೇಶ್ ಗುಲಿಯಾ ಅವರನ್ನು ಮಣಿಸಿ ಎಬಿವಿಪಿಯ  ತುಷಾರ್ ದೇಧಾ ಆಯ್ಕೆಗೊಂಡಿದ್ದಾರೆ.

ಕಾಂಗ್ರೆಸ್ ವಿದ್ಯಾರ್ಥಿ ಘಟಕದ ಅಭಿ ದಹಿಯಾ ಉಪಾಧ್ಯಕ್ಷ ಸ್ಥಾನವನ್ನು ಪಡೆದ್ದಾರೆ. ಕಾರ್ಯದರ್ಶಿ ಹುದ್ದೆಯನ್ನು ಎಬಿವಿಪಿಯ ಅಪರಾಜಿತ ಪಡೆದಿದ್ದರೆ, ಜಂಟಿ ಕಾರ್ಯದರ್ಶಿ ಹುದ್ದೆಗೆ ಸಚಿನ್ ಬೈಸ್ಲಾ ಆಯ್ಕೆಯಾಗಿದ್ದಾರೆ. ಡಿಯುಎಸ್‌ಯು ಕೇಂದ್ರ ಸಮಿತಿಯ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ ಮತ್ತು ಜಂಟಿ ಕಾರ್ಯದರ್ಶಿ ಹುದ್ದೆಗಳ ಮತ ಎಣಿಕೆ ಶನಿವಾರ ಸಂಜೆ ಮುಕ್ತಾಯಗೊಂಡಿದೆ. ಈ ಹುದ್ದೆಗಳಿಗೆ ಶುಕ್ರವಾರ ಮತದಾನ ನಡೆದಿತ್ತು. ಡಿಯುಎಸ್ ಯು ಚುನಾವಣೆಗಳು ಯಾವಾಗಲೂ ಎಬಿವಿಪಿ ಮತ್ತು ಎನ್ ಎಸ್ ಯುಐ ನಡುವೆ ನೇರ ಹೋರಾಟವನ್ನು ಕಂಡಿವೆ.

2019 ರಲ್ಲಿ ಎಬಿವಿಪಿ ನಾಲ್ಕು ಸ್ಥಾನಗಳ ಪೈಕಿ ಮೂರು ಸ್ಥಾನಗಳನ್ನು ಗೆದ್ದಿತ್ತು. ಕೋವಿಡ್-19 ಕಾರಣದಿಂದಾಗಿ 2020-2021 ರಲ್ಲಿ ಚುನಾವಣೆ ನಡೆದಿರಲಿಲ್ಲ. 2022 ರಲ್ಲಿ ಶೈಕ್ಷಣಿಕ ಕ್ಯಾಲೆಂಡರ್ ಗೆ ಅಡಚಣೆಗಳು ಉಂಟಾಗಿದ್ದ ಹಿನ್ನೆಲೆಯಲ್ಲಿ ಚುನಾವಣೆ ನಡೆದಿರಲಿಲ್ಲ. ಸುಮಾರು ಒಂದು ಲಕ್ಷ ಮಂದಿ ವಿದ್ಯಾರ್ಥಿಗಳು ಮತದಾನ ಮಾಡಲು ಅರ್ಹರಾಗಿದ್ದರು.

SCROLL FOR NEXT