ನವದೆಹಲಿ: ಲೋಕಸಭೆಯಲ್ಲಿ ಬಿಜೆಪಿ ಸಂಸದ ರಮೇಶ್ ಬಿಧುರಿ ಅವರು ಬಿಎಸ್ ಪಿ ಸಂಸದ ಡ್ಯಾನಿಶ್ ಅಲಿ ವಿರುದ್ಧ ನೀಡಿದ ಹೇಳಿಕೆಗಳ ಸುತ್ತ ಈಗ ಮತ್ತಷ್ಟು ವಿವಾದ ಉಂಟಾಗಿದೆ.
ರಮೇಶ್ ಬಿಧುರಿ ಹೇಳಿಕೆ ಬೆನ್ನಲ್ಲೆ ಬಿಜೆಪಿಯ ಮತ್ತೋರ್ವ ಸಂಸದ ನಿಶಿಕಾಂತ್ ದುಬೆ ವಿರುದ್ಧ ಡ್ಯಾನಿಶ್ ಅಲಿ ಗಂಭೀರ ಆರೋಪ ಮಾಡಿದ್ದಾರೆ.
ಅಲಿ ಬಗ್ಗೆ ತಮ್ಮ ಪಕ್ಷದ ಸಹೋದ್ಯೋದಿ ಬಿಧುರಿ ಪ್ರಯೋಗಿಸಿದ್ದ ಶಬ್ದಗಳನ್ನು ಖಂಡಿಸಿರುವ ದುಬೆ, ಡ್ಯಾನಿಶ್ ಅಲಿ ಪ್ರಧಾನಿ ವಿರುದ್ಧ ಜಾತಿವಾದಿ ನಿಂದನೆ ಮಾಡಿದ್ದರು ಇದು ಬಿಧುರಿ ಅವರನ್ನು ಪ್ರಚೋದಿಸಿ, ಬಿಎಸ್ ಪಿ ನಾಯಕನ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು ಎಂದು ದುಬೆ ಹೇಳಿದ್ದಾರೆ.
ಲೋಕಸಭೆಯಲ್ಲಿ ರಮೇಶ್ ಬಿಧುರಿ ಅವರು ನೀಡಿರುವ ಹೇಳಿಕೆಗಳನ್ನು ಸರಿ ಎಂದು ಯಾವುದೇ ನಾಗರಿಕ ಸಮಾಜ ಒಪ್ಪುವುದಿಲ್ಲ.
ಆದರೆ ಡ್ಯಾನಿಶ್ ಅಲಿ ಅವರ ಅಸಭ್ಯ ಮಾತುಗಳು ಮತ್ತು ನಡವಳಿಕೆಯ ಬಗ್ಗೆ ಲೋಕಸಭೆ ಸ್ಪೀಕರ್ ತನಿಖೆ ನಡೆಸಬೇಕು" ಎಂದು ದುಬೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. “ಲೋಕಸಭೆಯ ನಿಯಮಗಳು ಮತ್ತು ಕಾರ್ಯವಿಧಾನಗಳ ಪ್ರಕಾರ, ನಿಗದಿತ ಸಮಯದಲ್ಲಿ ಸಂಸದರನ್ನು ಅಡ್ಡಿಪಡಿಸುವುದು, ಕುಳಿತು ಮಾತನಾಡುವುದು... ಸಹ ಶಿಕ್ಷೆಯ ವ್ಯಾಪ್ತಿಗೆ ಬರುತ್ತದೆ, ನಾನು ಕಳೆದ 15 ವರ್ಷಗಳಿಂದ ಸಂಸದನಾಗಿದ್ದೇನೆ ಎಂದು ದುಬೆ ಹೇಳಿದ್ದಾರೆ.
ತಮ್ಮ ವಿರುದ್ಧದ ಆರೋಪಗಳಿಗೆ ಪ್ರತಿಕ್ರಿಯೆ ನೀಡಿರುವ ಅಲಿ, ಬಿಜೆಪಿ ನಾಯಕರ ಹೇಳಿಕೆಗಳ ಉದ್ದೇಶ ಸದನದ ಹೊರಗೆ ತಮ್ಮ ಮೇಲೆ ಸಾಮೂಹಿಕ ಹಲ್ಲೆ ನಡೆಯುವಂತೆ ಮಾಡುವುದಾಗಿದೆ. ಸದನದ ಒಳಗೆ ಈಗಾಲೇ ಮೌಖಿಕ ಹಲ್ಲೆ ನಡೆದಿದೆ ಎಂದು ಡ್ಯಾನಿಶ್ ಅಲಿ ಆರೋಪಿಸಿದ್ದಾರೆ.