ದೇಶ

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮೊಣಕಾಲಿಗೆ ಗಾಯ; 10 ದಿನಗಳ ವಿಶ್ರಾಂತಿಗೆ ವೈದ್ಯರ ಸೂಚನೆ

Ramyashree GN

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚೆಗಷ್ಟೇ ಸ್ಪೇನ್ ಮತ್ತು ದುಬೈ ಪ್ರವಾಸಕ್ಕೆ ತೆರಳಿದ್ದ ವೇಳೆ ಅವರ ಎಡ ಮೊಣಕಾಲಿಗೆ ಗಾಯವಾಗಿದ್ದು, 10 ದಿನಗಳ ವಿಶ್ರಾಂತಿ ಪಡೆಯಬೇಕೆಂದು ವೈದ್ಯರು ಭಾನುವಾರ ಸಲಹೆ ನೀಡಿದ್ದಾರೆ.

ಬ್ಯಾನರ್ಜಿ ಅವರು ಆರೋಗ್ಯ ತಪಾಸಣೆಗೆಂದು ಎಸ್‌ಎಸ್‌ಕೆಎಂ ಆಸ್ಪತ್ರೆಗೆ ತೆರಳಿದ ವೇಳೆ, ಎಂಆರ್‌ಐ ಸೇರಿದಂತೆ ಇತರೆ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಯಿತು. ಬಳಿಕ ವೈದ್ಯರು ವಿಶ್ರಾಂತಿಗೆ ಸೂಚಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ವಾರ ವಿದೇಶ ಪ್ರವಾಸದ ವೇಳೆ ಸಿಎಂ ಎಡ ಮೊಣಕಾಲಿಗೆ ಗಾಯವಾಗಿತ್ತು. ಈ ವರ್ಷದ ಆರಂಭದಲ್ಲಿ ಹೆಲಿಕಾಪ್ಟರ್‌ನಿಂದ ಇಳಿಯುವಾಗಲೂ ಅದೇ ಮೊಣಕಾಲಿಗೆ ಗಾಯವಾಗಿತ್ತು. ಕೆಲವು ಪರೀಕ್ಷೆಗಳನ್ನು ನಡೆಸಿದ ನಂತರ ನಾವು ಅವರಿಗೆ 10 ದಿನಗಳ ವಿಶ್ರಾಂತಿಗೆ ಸೂಚಿಸಿದ್ದೇವೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಕಳೆದ ಜೂನ್‌ನಲ್ಲಿ ಎಡ ಮೊಣಕಾಲಿನ ಅಸ್ಥಿರಜ್ಜು ಗಾಯದಿಂದ ಬಳಲುತ್ತಿದ್ದ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥರು, ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. 

ರಾಜ್ಯದಲ್ಲಿ ಹೂಡಿಕೆ ಮಾಡುವಂತೆ ಮನವಿ ಮಾಡಿದ್ದ ಬ್ಯಾನರ್ಜಿ ಅವರು 12 ದಿನಗಳ ಸ್ಪೇನ್ ಮತ್ತು ದುಬೈ ಪ್ರವಾಸದ ನಂತರ ಶನಿವಾರ ಸಂಜೆ ನಗರಕ್ಕೆ ಮರಳಿದರು. 

SCROLL FOR NEXT