ದೇಶ

ಪುಲ್ವಾಮಾ ದಾಳಿ ತನಿಖಾಧಿಕಾರಿ ರಾಕೇಶ್ ಬಲ್ವಾಲ್ ಜಮ್ಮು ಮತ್ತು ಕಾಶ್ಮೀರದಿಂದ ಮಣಿಪುರಕ್ಕೆ ವರ್ಗಾವಣೆ!

Ramyashree GN

ನವದೆಹಲಿ: ಈಶಾನ್ಯ ರಾಜ್ಯದಲ್ಲಿ ಹೊಸ ಹಿಂಸಾಚಾರ ಭುಗಿಲೆದ್ದಿರುವ ನಡುವೆಯೇ, ಕೇಂದ್ರ ಸರ್ಕಾರವು ಹಿರಿಯ ಐಪಿಎಸ್ ಅಧಿಕಾರಿ ರಾಕೇಶ್ ಬಲ್ವಾಲ್ ಅವರನ್ನು ಜಮ್ಮು ಮತ್ತು ಕಾಶ್ಮೀರದಿಂದ ಮಣಿಪುರಕ್ಕೆ ವರ್ಗಾವಣೆ ಮಾಡಿದೆ.

ಶ್ರೀನಗರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿಯಾಗಿ (ಎಸ್‌ಎಸ್‌ಪಿ) ಸೇವೆ ಸಲ್ಲಿಸುದ್ದ 2012ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಬಲ್ವಾಲ್ ಅವರನ್ನು ಅವರ ಪೋಷಕ ಕೇಡರ್ ಮಣಿಪುರಕ್ಕೆ ವರ್ಗಾಯಿಸಲಾಗಿದೆ. ಮಣಿಪುರದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಪರಿಸ್ಥಿತಿ ಉದ್ವಿಗ್ನವಾಗಿದೆ.

ರಾಕೇಶ್ ಅವರು 2021ರ ಕೊನೆಯಲ್ಲಿ ಶ್ರೀನಗರ ಎಸ್ಎಸ್‌ಪಿ ಆಗಿ ಅಧಿಕಾರ ವಹಿಸಿಕೊಂಡಿದ್ದರು.

'ಐಪಿಎಸ್ ಅಧಿಕಾರಿ ರಾಕೇಶ್ ಬಲ್ವಾಲ್ ಅವರನ್ನು ಅರುಣಾಚಲ ಪ್ರದೇಶ-ಗೋವಾ-ಮಿಜೋರಾಂ ಮತ್ತು ಕೇಂದ್ರಾಡಳಿತ ಪ್ರದೇಶ (AGMUT) ಕೇಡರ್‌ನಿಂದ ಮಣಿಪುರ ಕೇಡರ್‌ಗೆ ಅವಧಿಪೂರ್ವ ವರ್ಗಾಯಿಸುವ ಗೃಹ ವ್ಯವಹಾರಗಳ ಸಚಿವಾಲಯದ ಪ್ರಸ್ತಾವನೆಯನ್ನು ಸಂಪುಟದ ನೇಮಕಾತಿ ಸಮಿತಿಯು ಅನುಮೋದಿಸಿದೆ' ಎಂದು ಅಧಿಕೃತ ಆದೇಶ ತಿಳಿಸಿದೆ.

ಶ್ರೀನಗರ ಎಸ್‌ಎಸ್‌ಪಿಯಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು ಬಲ್ವಾಲ್ ಅವರು ಮೂರೂವರೆ ವರ್ಷಗಳ ಕಾಲ ಪೊಲೀಸ್ ಸೂಪರಿಂಟೆಂಡೆಂಟ್ ಆಗಿ ಎನ್‌ಐಎಗೆ ನಿಯೋಜನೆಗೊಂಡಿದ್ದರು. 40 ಸಿಆರ್‌ಪಿಎಫ್ ಸಿಬ್ಬಂದಿ ಪ್ರಾಣ ಕಳೆದುಕೊಂಡ 2019ರ ಪುಲ್ವಾಮಾ ಭಯೋತ್ಪಾದಕ ದಾಳಿಯ ತನಿಖೆ ನಡೆಸಿದ ತಂಡದ ಸದಸ್ಯರಾಗಿದ್ದರು.

ಮೇ 3ರಂದು ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಪ್ರಾರಂಭವಾದಾಗಿನಿಂದ ಈವರೆಗೂ 180ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ ಮತ್ತು ನೂರಾರು ಜನರು ಗಾಯಗೊಂಡಿದ್ದಾರೆ. 

ಜುಲೈನಲ್ಲಿ ನಾಪತ್ತೆಯಾದ ಮೈತೇಯಿ ಸಮುದಾಯಕ್ಕೆ ಸೇರಿದ ಇಬ್ಬರು ವಿದ್ಯಾರ್ಥಿಗಳ ಮೃತದೇಹಗಳ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಈ ಬಾರಿ ವಿದ್ಯಾರ್ಥಿಗಳ ನೇತೃತ್ವದಲ್ಲಿ ರಾಜ್ಯ ರಾಜಧಾನಿಯಲ್ಲಿ ಮಂಗಳವಾರ ಮುಂಜಾನೆಯಿಂದ ಹೊಸ ಹಿಂಸಾಚಾರ ಭುಗಿಲೆದ್ದಿದೆ.

ಗುರುವಾರ ಮುಂಜಾನೆ ಪ್ರತಿಭಟನಾಕಾರರು ಇಂಫಾಲ ಪಶ್ಚಿಮದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯನ್ನು ಧ್ವಂಸಗೊಳಿಸಿದ್ದು, ಎರಡು ವಾಹನಗಳಿಗೆ ಬೆಂಕಿ ಹಚ್ಚಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT