ಸಂಜಯ್ ನಿರುಪಮ್ ಕಾಂಗ್ರೆಸ್ ನಿಂದ ಉಚ್ಛಾಟನೆ
ಸಂಜಯ್ ನಿರುಪಮ್ ಕಾಂಗ್ರೆಸ್ ನಿಂದ ಉಚ್ಛಾಟನೆ 
ದೇಶ

ಉದ್ಧವ್ ಠಾಕ್ರೆ ಕುರಿತು ಟೀಕೆ: Sanjay Nirupam ಕಾಂಗ್ರೆಸ್ ನಿಂದ ಉಚ್ಛಾಟನೆ!

Srinivasamurthy VN

ಮುಂಬೈ: ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಇತ್ತ ಮಹಾರಾಷ್ಟ್ರ ಕಾಂಗ್ರೆಸ್ ನಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಪಕ್ಷದ ಹಿರಿಯ ನಾಯಕ ಸಂಜಯ್ ನಿರುಪಮ್ ರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.

“ಪಕ್ಷ ವಿರೋಧಿ ಹಾಗೂ ಅಶಿಸ್ತಿನ ಕುರಿತು ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಸಂಜಯ್‌ ನಿರುಪಮ್‌ ಅವರನ್ನು ಪಕ್ಷದಿಂದ ಉಚ್ಚಾಟನೆಗೊಳಿಸಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಒಪ್ಪಿಗೆ ಸೂಚಿಸಿದ್ದಾರೆ. ಈ ಕ್ಷಣದಿಂದಲೇ ಜಾರಿಗೆ ಬರುವಂತೆ ಸಂಜಯ್‌ ನಿರುಪಮ್‌ ಅವರನ್ನು ಆರು ವರ್ಷಗಳವರೆಗೆ ಪಕ್ಷದಿಂದ ಉಚ್ಚಾಟಿಸಲಾಗಿದೆ” ಎಂದು ಕಾಂಗ್ರೆಸ್‌ ಪ್ರಕಟಣೆ ತಿಳಿಸಿದೆ.

ಉದ್ಧವ್ ಠಾಕ್ರೆ ಕುರಿತು ಹೇಳಿಕೆ ನೀಡಿದ್ದ ಸಂಜಯ್ ನಿರುಪಮ್

ಇನ್ನು ಸಂಜಯ್ ನಿರುಪಮ್ ಉಚ್ಛಾಟನೆಗೆ ಅವರು ಇಂಡಿಯಾ ಮೈತ್ರಿಕೂಟದ ಅಂಗವಾಗಿರುವ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ವಿರುದ್ಧವಾಗಿ ಹೇಳಿಕೆ ನೀಡಿದ್ದರು ಎಂದು ಹೇಳಲಾಗಿದೆ. ಕಳೆದ ಕೆಲ ದಿನಗಳಿಂದ ಸಂಜಯ್‌ ನಿರುಪಮ್‌ ಅವರು ಮಹಾರಾಷ್ಟ್ರದಲ್ಲಿ ಉದ್ಧವ್‌ ಠಾಕ್ರೆ ಬಣದ ಶಿವಸೇನೆ ಜತೆ ಕಾಂಗ್ರೆಸ್‌ ಸೀಟು ಹಂಚಿಕೆ ಕುರಿತಂತೆ ಮಾತುಕತೆ ನಡೆಸುತ್ತಿರುವ ಕುರಿತು, ತೆಗೆದುಕೊಳ್ಳುತ್ತಿರುವ ನಿರ್ಧಾರಗಳ ಕುರಿತು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು.

ಉದ್ಧವ್‌ ಠಾಕ್ರೆ ಬಣದ ಪಕ್ಷ ಹೇಳಿದ ಹಾಗೆ ಕಾಂಗ್ರೆಸ್‌ ಕೇಳುತ್ತಿದೆ ಎಂದು ಸಂಜಯ್‌ ನಿರುಪಮ್‌ ಆರೋಪಿಸಿದ್ದರು. ಇದಕ್ಕೆ ಇಂಬು ನೀಡುವಂತೆ ಮುಂಬೈನ ಆರು ಲೋಕಸಭೆ ಕ್ಷೇತ್ರಗಳಲ್ಲಿ ಈಗಾಗಲೇ ಉದ್ಧವ್‌ ಠಾಕ್ರೆ ಬಣದ ಶಿವಸೇನೆ ನಾಲ್ಕು ಕ್ಷೇತ್ರಗಳಿಗೆ ಟಿಕೆಟ್‌ ಘೋಷಣೆ ಮಾಡಿದೆ.

ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಸಂಜಯ್ ಹೆಸರು ಕೈಬಿಟ್ಟಿದ್ದ ಕಾಂಗ್ರೆಸ್

ಈ ಬೆಳವಣಿಗೆ ಬೆನ್ನಲ್ಲೇ ಮಹಾರಾಷ್ಟ್ರದ ಸ್ಟಾರ್‌ ಪ್ರಚಾರಕರ ಪಟ್ಟಿಯಿಂದ ಸಂಜಯ್‌ ನಿರುಪಮ್‌ ಅವರನ್ನು ಕಾಂಗ್ರೆಸ್‌ ತೆಗೆದುಹಾಕಿತ್ತು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ಅವರು, ನನ್ನ ವಿರುದ್ಧ ಕ್ರಮ ತೆಗೆದು ಕೊಳ್ಳುವ ಬದಲು ಪಕ್ಷವು ತನ್ನ ಸ್ಥಿತಿಯನ್ನು ಸುಧಾರಿಸಿಕೊಳ್ಳಲಿ ಎಂದು ಟಾಂಗ್‌ ಕೊಟ್ಟಿದ್ದರು. ಇದರ ಮಧ್ಯೆಯೇ, ಮಹಾರಾಷ್ಟ್ರ (Maharashtra) ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಇದನ್ನು ನಿಯಂತ್ರಿಸುವ ದಿಸೆಯಲ್ಲಿ ಪಕ್ಷದ ನಾಯಕ, ಮಾಜಿ ಸಂಸದ ಸಂಜಯ್‌ ನಿರುಪಮ್‌ (Sanjay Nirupam) ಅವರನ್ನು ಕಾಂಗ್ರೆಸ್‌ ಉಚ್ಚಾಟನೆ ಮಾಡಿದೆ.

SCROLL FOR NEXT