ಪಿಣರಾಯಿ ವಿಜಯನ್ ಮತ್ತು ರಾಹುಲ್ ಗಾಂಧಿ
ಪಿಣರಾಯಿ ವಿಜಯನ್ ಮತ್ತು ರಾಹುಲ್ ಗಾಂಧಿ 
ದೇಶ

Pinarayi Vijayan Slams Congress: 'ಪ್ರಣಾಳಿಕೆಯಲ್ಲಿ CAA ಉಲ್ಲೇಖಿಸಲು ಕಾಂಗ್ರೆಸ್‌ಗೆ ಭಯ'

Srinivasamurthy VN

ತಿರುವನಂತಪುರಂ: 2024ರ ಲೋಕಸಭಾ ಪ್ರಣಾಳಿಕೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ (ಸಿಎಎ) ಬಗ್ಗೆ ಯಾವುದೇ ಉಲ್ಲೇಖ ಮಾಡದೇ ಇರುವ ಕಾಂಗ್ರೆಸ್‌ ವಿರುದ್ಧ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಿಡಿಕಾರಿದ್ದು, 'ಪ್ರಣಾಳಿಕೆಯಲ್ಲಿ CAA ಉಲ್ಲೇಖಿಸಲು ಕಾಂಗ್ರೆಸ್‌ಗೆ ಭಯ' ಎಂದು ಟೀಕಿಸಿದ್ದಾರೆ.

ಕೇರಳದ ಕೊಲ್ಲಂನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಿಣರಾಯಿ ವಿಜಯನ್, '2024ರ ಲೋಕಸಭಾ ಪ್ರಣಾಳಿಕೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ (ಸಿಎಎ) ಬಗ್ಗೆ ಯಾವುದೇ ಉಲ್ಲೇಖ ಮಾಡಿಲ್ಲ. ವಿವಾದಾತ್ಮಕ ವಿಷಯಗಳ ಬಗ್ಗೆ ಪ್ರಸ್ತಾಪಿಸಲು ಕಾಂಗ್ರೆಸ್‌ಗೆ ಇರುವ ಭಯವನ್ನು ಇದು ತೋರಿಸುತ್ತದೆ.

ಅಧಿಕಾರಕ್ಕೆ ಬಂದರೆ ಜಿಎಸ್‌ಟಿ ಸೇರಿ, ಸಂವಿಧಾನವನ್ನು ಉಲ್ಲಂಘಿಸಿ ಜಾರಿಗೆ ತರಲಾದ ಹಲವು ಕಾನೂನುಗಳನ್ನು ವಾಪಸ್ ಪಡೆಯುವುದಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹೇಳಿದೆ. ಆದರೆ ಸಿಎಎ ಬಗ್ಗೆ ಒಂದು ಶಬ್ದವನ್ನೂ ಉಲ್ಲೇಖಿಸಿಲ್ಲ ಎಂದು ಕಿಡಿಕಾರಿದರು.

ಸಿಎಎ ಅನ್ನು ಪ್ರಣಾಳಿಕೆಯಲ್ಲಿ ಉಲ್ಲೇಖಿಸದೇ ಉದ್ದೇಶಪೂರ್ವಕವಾಗಿಯೇ ಹೊರಗಿಡಲಾಗಿದೆ. ಹಲವು ಕಾನೂನುಗಳನ್ನು ಉಲ್ಲೇಖಿಸಿ ಅವುಗಳನ್ನು ಹಿಂಪಡೆಯುವುದಾಗಿ ಭರವಸೆ ನೀಡಿರುವ ಕಾಂಗ್ರೆಸ್, ಸಿಎಎ ಬಗ್ಗೆ ಮಾತನಾಡಲು ಭಯಪಡುತ್ತಿದೆ. ಸಂವಿಧಾನದ 15,16,25,26,28,29 ಹಾಗೂ 30ನೇ ಪರಿಚ್ಛೇದದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಿಗೆ ನೀಡಲಾಗಿರುವ ಮೂಲಭೂತ ಹಕ್ಕುಗಳ ರಕ್ಷಣೆ ಮಾಡುವುದಾಗಿ ಪ್ರಣಾಳಿಕೆಯ 8ನೇ ಪುಟದಲ್ಲಿ ಉಲ್ಲೇಖಿಸಲಾಗಿದೆ.

ಆದರೆ ಈ ಸಂಬಂಧ ಸಿಎಎಯಲ್ಲಿ ಇರುವ ಯಾವುದರ ಬಗ್ಗೆಯೂ ಕಾಂಗ್ರೆಸ್ ಚಕಾರವೆತ್ತಿಲ್ಲ. ಸಿಎಎಯು ಸಂವಿಧಾನದ 14ನೇ ಪರಿಚ್ಛೇದವನ್ನು ಉಲ್ಲಂಘಿಸುತ್ತದೆ. ಆದರೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ 14ನೇ ಪರಿಚ್ಛೇದದ ಉಲ್ಲೇಖವೇ ಇಲ್ಲ ಎಂದು ಕಾಂಗ್ರೆಸ್ ನಡೆಯನ್ನು ಟೀಕಿಸಿದ್ದಾರೆ.

ಮೋದಿ ಸರ್ಕಾರದ ಕೆಲ ಕಾನೂನು ರದ್ಧತಿಗೆ ಬೆಂಬಲ

ಅಂತೆಯೇ ಕಾರ್ಮಿಕರು, ರೈತರು, ಕ್ರಿಮಿನಲ್ ನ್ಯಾಯ, ಪರಿಸರ, ಅರಣ್ಯ ಮತ್ತು ಡಿಜಿಟಲ್ ದತ್ತಾಂಶ ರಕ್ಷಣೆ ಮುಂತಾದ ಜನವಿರೋಧಿ ಕಾನೂನುಗಳನ್ನು ರದ್ದು ಮಾಡುವುದಾಗಿ ಕಾಂಗ್ರೆಸ್ ಭರವಸೆಯಿತ್ತಿದೆ. ಇದಕ್ಕೆ ನಮ್ಮ ಬೆಂಬಲವಿದೆ ಎಂದು ಅವರು ಹೇಳಿದ್ದಾರೆ.

ಏನಿದು ಸಿಎಎ?

ಜನವರಿ 10 ರಂದು ಕೇಂದ್ರದ ಮೋದಿ ಸರ್ಕಾರ ಅಧಿಸೂಚನೆ ಹೊರಡಿಸಿದ CAA, ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ಭಾರತಕ್ಕೆ ವಲಸೆ ಬಂದಿರುವ ಮುಸ್ಲಿಮೇತರ ಅಲ್ಪಸಂಖ್ಯಾತರಿಗೆ ಅಂದರೆ ಹಿಂದೂ, ಸಿಖ್, ಬೌದ್ಧ, ಜೈನ್, ಪಾರ್ಸಿ ಮತ್ತು ಕ್ರಿಶ್ಚಿಯನ್ನರಿಗೆ ಭಾರತೀಯ ಪೌರತ್ವವನ್ನು ನೀಡಿಕೆಗೆ ಅವಕಾಶ ನೀಡುವ ಕಾಯ್ದೆಯಾಗಿದೆ.

SCROLL FOR NEXT