ನವದೆಹಲಿ: ಲೋಕಸಭೆ ಚುನಾವಣೆಯ (Lok Sabha Elections 2024) ಹೊತ್ತಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಸಾಮಾಜಿಕ ಮಾಧ್ಯಮ ಎಕ್ಸ್ (ಹಿಂದಿನ ಟ್ವಿಟರ್)ನಲ್ಲಿ ಕನ್ನಡ ಭಾಷೆಯಲ್ಲಿ ಪ್ರತ್ಯೇಕ ಖಾತೆ (Narendra Modi Kannada X) ತೆರೆದಿದ್ದಾರೆ.
‘ನಮೋ ಕನ್ನಡ’ ಎಂಬ ಹೆಸರಿನಲ್ಲಿ ನರೇಂದ್ರ ಮೋದಿ ಕನ್ನಡ ಖಾತೆ ಆರಂಭಿಸಲಾಗಿದೆ. ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಏಪ್ರಿಲ್ 26ರಂದು ನಡೆಯಲಿದ್ದು, ಎರಡನೇ ಹಂತದ ಮತದಾನ ಮೇ 7ರಂದು ನಡೆಯಲಿದೆ. ಕನ್ನಡಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ತಲುಪಲು ಮೋದಿಯವರು ಕನ್ನಡದಲ್ಲಿ ಟ್ವಿಟ್ಟರ್ ಖಾತೆ ತೆರೆದಿದ್ದಾರೆ.
ಕನ್ನಡ ಭಾಷೆಯಲ್ಲಿ ಮೋದಿ ತೆರೆದಿರುವ ಪ್ರತ್ಯೇಕ ಟ್ವಿಟ್ಟರ್ ಖಾತೆಯಲ್ಲಿ ಮೋದಿ ಭಾಷಣದ ವಿಡಿಯೋ ತುಣುಕುಗಳನ್ನು ಪೋಸ್ಟ್ ಮಾಡಲಾಗಿದೆ. ಈ ವಿಡಿಯೋಗಳಿಗೆ ಮೋದಿ ಭಾಷಣದ ಕನ್ನಡಾನುವಾದದ ಹಿನ್ನೆಲೆ ಧ್ವನಿ ನೀಡಲಾಗಿದೆ.
ಈಗಾಗಲೇ ಕರ್ನಾಟಕದಲ್ಲಿ ಒಂದು ಸುತ್ತಿನ ಚುನಾವಣಾ ಪ್ರಚಾರ ನಡೆಸಿರುವ ಮೋದಿ, ಮತ್ತೊಮ್ಮೆ ಏಪ್ರಿಲ್ 14ರಂದು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಏಪ್ರಿಲ್ 14ರ ಭಾನುವಾರ ಮಂಗಳೂರಿನಲ್ಲಿ ರೋಡ್ ಶೋದಲ್ಲಿ ಭಾಗವಹಿಸಲಿದ್ದು, ನಂತರ ಬೆಂಗಳೂರಿನಲ್ಲಿ ರೋಡ್ ಶೋ ನಡೆಸಲಿದ್ದಾರೆ.