ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್ 
ದೇಶ

ತಮ್ಮ ವೈದ್ಯರನ್ನು ಸಂಪರ್ಕಿಸಲು ಅನುಮತಿ ಕೋರಿ ಕೋರ್ಟ್ ಮೊರೆ ಹೋದ ಕೇಜ್ರಿವಾಲ್

Lingaraj Badiger

ನವದೆಹಲಿ: ಅಬಕಾರಿ ನೀತಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ತಮ್ಮ ಸಾಮಾನ್ಯ ವೈದ್ಯರನ್ನು ಸಂಪರ್ಕಿಸಲು ಅನುಮತಿ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ತಮ್ಮ ಬ್ಲಡ್ ಶುಗರ್ ಏರುಪೇರಾಗುತ್ತಿದ್ದು, ನಿಯಮಿತ ವೈದ್ಯರನ್ನು ಸಂಪರ್ಕಿಸಲು ಅನುಮತಿ ನೀಡಬೇಕು ಎಂದು ದೆಹಲಿ ಸಿಎಂ ವಿಶೇಷ ನ್ಯಾಯಾಧೀಶ ರಾಕೇಶ್ ಸೈಲ್ ಅವರಿಗೆ ಅರ್ಜಿ ಸಲ್ಲಿಸಿದ್ದು, ಇದಕ್ಕೆ ಉತ್ತರ ಸಲ್ಲಿಸುವಂತೆ ಕೋರ್ಟ್ ಇಡಿಗೆ ಸೂಚಿಸಿದೆ. ಅಲ್ಲದೆ ಅರ್ಜಿಯ ವಿಚಾರಣೆಯನ್ನು ಏಪ್ರಿಲ್ 18 ರಂದು ಪಟ್ಟಿ ಮಾಡಿದೆ.

ಕೇಜ್ರಿವಾಲ್ ಅವರ ರಕ್ತದಲ್ಲಿನ ಸಕ್ಕರೆ ಪ್ರಮಾಣದಲ್ಲಿ ಏರಿಳಿತವಾಗಿದೆ ಮತ್ತು ಅದು 46ಕ್ಕೆ ಇಳಿದಿದೆ. ಈ ಪರಿಸ್ಥಿತಿಯಲ್ಲಿ, ಅವರು ವಾರಕ್ಕೆ ಮೂರು ಬಾರಿ ತಮ್ಮ ವೈದ್ಯರನ್ನು ಸಂಪರ್ಕಿಸಲು ಅವಕಾಶ ನೀಡಬೇಕು ಎಂದು ಕೇಜ್ರಿವಾಲ್ ಪರ ವಕೀಲ ವಿವೇಕ್ ಜೈನ್ ಅವರು ಅರ್ಜಿ ಸಲ್ಲಿಸಿದ್ದಾರೆ.

ಮತ್ತೊಂದೆಡೆ, ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (ಇಡಿ) ಸೈಮನ್ ಬೆಂಜಮಿನ್ ಅವರು ಜೈಲಿನಲ್ಲಿ ಸೌಲಭ್ಯಗಳಿವೆ ಮತ್ತು ಅವರನ್ನು ಅಲ್ಲಿ ಪರಿಶೀಲಿಸಬಹುದು ಎಂದು ವಾದಿಸಿದರು. ಕೇಜ್ರಿವಾಲ್ ಅವರ ಆರೋಗ್ಯದ ಬಗ್ಗೆ ಇಡಿ ನಿಜಕ್ಕೂ ಕಾಳಜಿ ವಹಿಸುತ್ತಿದ್ದರೆ ಅವರ ವೈದ್ಯರನ್ನು ಸಂಪರ್ಕಿಸಲು ಏಕೆ ವಿರೋಧಿಸುತ್ತಿದೆ ಎಂದು ಕೇಜ್ರಿವಾಲ್ ಪರ ವಕೀಲರು ವಾದಿಸಿದರು.

ರದ್ದುಗೊಂಡಿರುವ ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ಅವರನ್ನು ಇಡಿ ಬಂಧಿಸಿದ್ದು, ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ದೆಹಲಿ ನ್ಯಾಯಾಲಯ ಸೋಮವಾರ ಏಪ್ರಿಲ್ 23 ರವರೆಗೆ ವಿಸ್ತರಿಸಿದೆ.

SCROLL FOR NEXT