ಕೋಲ್ಕತ್ತ: ಅರಣ್ಯ ಇಲಾಖೆಯ ಮಹಿಳಾ ಅಧಿಕಾರಿಯೊಬ್ಬರಿಗೆ ಬೆದರಿಕೆ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ ಪಶ್ಚಿಮ ಬಂಗಾಳದ ಜೈಲು ಸಚಿವ ಅಖಿಲ್ ಗಿರಿ ಭಾನುವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ಪ್ರಕಟಿಸಿದ್ದಾರೆ.
ರಾಮನಗರದ ಶಾಸಕರಾಗಿರುವ ಗಿರಿ ಅವರು ಅರಣ್ಯ ಸಂರಕ್ಷಣಾಧಿಕಾರಿ ಮನೀಶಾ ಸಾಹು ಅವರಿಗೆ ಬೆದರಿಕೆ ಹಾಕುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ತದನಂತರ ಸಚಿವರು, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಹಾಗೂ ಮಹಿಳಾ ಅಧಿಕಾರಿ ಬಳಿ ಕ್ಷಮೆಯಾಚಿಸುವಂತೆ ತೃಣಮೂಲ ಕಾಂಗ್ರೆಸ್ ಪಕ್ಷದಿಂದ ಸೂಚಿಸಲಾಗಿತ್ತು.
ಪುರ್ಬಾ ಮೇದಿನಿಪುರ ಜಿಲ್ಲೆಯ ಕಂಠಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗಿರಿ, ರಾಜೀನಾಮೆ ನೀಡುತ್ತೇನೆ ಆದರೆ ಕ್ಷಮೆಯಾಚಿಸುವುದಿಲ್ಲ ಎಂದು ಹೇಳಿದರು. ತಾಜ್‌ಪುರ ಬಳಿಯ ಬೀಚ್ ಬಳಿ ಅರಣ್ಯ ಇಲಾಖೆಯ ಜಮೀನಿನ ಒತ್ತುವರಿಯನ್ನು ತೆರವುಗೊಳಿಸಿದ ನಂತರ ಅವರ ಸೇವಾವಧಿಯನ್ನು ಕಡಿತಗೊಳಿಸುವುದಾಗಿ ಸಚಿವರು ಸಾರ್ವಜನಿಕವಾಗಿ ಬೆದರಿಕೆ ಹಾಕಿದ್ದರು.
ಪಕ್ಷದ ಸೂಚನೆಯಂತೆ ರಾಜ್ಯಾಧ್ಯಕ್ಷ ಸುಬ್ರತಾ ಬಕ್ಷಿ ಅವರು ಭಾನುವಾರ ಮಧ್ಯಾಹ್ನ ಅಖಿಲ್ ಗಿರಿಗೆ ಕರೆ ಮಾಡಿ, ಮಹಿಳಾ ಅಧಿಕಾರಿಗೆ ಕ್ಷಮೆಯಾಚಿಸುವಂತೆ ಮತ್ತು ತಕ್ಷಣವೇ ರಾಜೀನಾಮೆ ಸಲ್ಲಿಸುವಂತೆ ಸೂಚಿಸಿದರು ಎಂದು ಟಿಎಂಸಿ ವಕ್ತಾರ ಶಾಂತನು ಸೇನ್ ತಿಳಿಸಿದರು.
ಇಂದು ರಾತ್ರಿ ನನ್ನ ರಾಜೀನಾಮೆಯನ್ನು ಇಮೇಲ್ ಮಾಡುತ್ತೇನೆ. ನಾಳೆ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ವೈಯಕ್ತಿಕವಾಗಿ ಹಸ್ತಾಂತರಿಸುತ್ತೇನೆ" ಎಂದು ಅಲಿಖ್ ಗಿರಿ ತಿಳಿಸಿದರು.