ನವದೆಹಲಿ: ಬಾಂಗ್ಲಾದೇಶದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳ ನಡುವೆ 100ಕ್ಕೂ ಹೆಚ್ಚು ನಾಗರಿಕರು ಪ್ರಾಣಕಳೆದುಕೊಂಡಿದ್ದು, ಭಾರತವು ತನ್ನ ಪ್ರಜೆಗಳಿಗೆ ಮುಂದಿನ ಸೂಚನೆ ಬರುವವರೆಗೆ ಬಾಂಗ್ಲಾದೇಶಕ್ಕೆ ಪ್ರಯಾಣಿಸದಂತೆ ಎಚ್ಚರಿಕೆ ನೀಡಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯವು (MEA) ಪ್ರಸ್ತುತ ಬಾಂಗ್ಲಾದೇಶದಲ್ಲಿ ವಾಸಿಸುತ್ತಿರುವ ತನ್ನ ನಾಗರಿಕರಿಗೆ ಅತ್ಯಂತ ಜಾಗರೂಕರಾಗಿರಿ, ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಬರುವಂತೆ ಸೂಚಿಸಿದೆ.
ಬಾಂಗ್ಲಾದೇಶದಲ್ಲಿ ಈಗ ನಡೆಯುತ್ತಿರುವ ಬೆಳವಣಿಗೆಗಳ ದೃಷ್ಟಿಯಿಂದ, ಮುಂದಿನ ಸೂಚನೆ ಬರುವವರೆಗೂ ಬಾಂಗ್ಲಾದೇಶಕ್ಕೆ ಪ್ರಯಾಣಿಸದಂತೆ ಭಾರತೀಯ ಪ್ರಜೆಗಳಿಗೆ ಸಲಹೆ ನೀಡಲಾಗಿದೆ" ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಪ್ರಸ್ತುತ ಬಾಂಗ್ಲಾದೇಶದಲ್ಲಿರುವ ಎಲ್ಲಾ ಭಾರತೀಯ ಪ್ರಜೆಗಳು ತೀವ್ರ ಎಚ್ಚರಿಕೆ ವಹಿಸಲು, ತಮ್ಮ ಚಲನವಲನಗಳನ್ನು ನಿರ್ಬಂಧಿಸಲು ಮತ್ತು ಢಾಕಾದಲ್ಲಿರುವ ಭಾರತದ ಹೈಕಮಿಷನ್ ಅವರ ತುರ್ತು ದೂರವಾಣಿ ಸಂಖ್ಯೆಗಳಾದ 8801958383679, 8801958383680, 8801937400591ಗೆ ಸಂಪರ್ಕಿಸಲು ಸೂಚಿಸಲಾಗಿದೆ.
ಬಾಂಗ್ಲಾದೇಶದಲ್ಲಿ ಮತ್ತೆ ಹಿಂಸಾಚಾರ ಆರಂಭವಾಗಿದ್ದು, 13 ಪೊಲೀಸ್ ಅಧಿಕಾರಿಗಳು ಸೇರಿದಂತೆ ಮೃತಪಟ್ಟವರ ಸಂಖ್ಯೆ 100ರ ಗಡಿ ದಾಟಿದೆ. ಹಲವರು ಗಾಯಗೊಂಡಿದ್ದಾರೆ ಎಂದು ಅಲ್ ಜಜೀರಾ ವರದಿ ಮಾಡಿದೆ.
ಪ್ರಧಾನಿ ಶೇಖ್ ಹಸೀನಾ ಅವರ ರಾಜೀನಾಮೆಗೆ ಒತ್ತಾಯಿಸಿ ಬೀದಿಗಿಳಿದ ಪ್ರತಿಭಟನಾಕಾರರನ್ನು ಚದುರಿಸಲು ಬಾಂಗ್ಲಾದೇಶ ಪೊಲೀಸರು ಅಶ್ರುವಾಯು ಮತ್ತು ಲಾಬಿ ಸ್ಟನ್ ಗ್ರೆನೇಡ್‌ಗಳನ್ನು ಪ್ರಯೋಗಿಸಿದರು.
ರಾಜಧಾನಿ ಢಾಕಾ ಮತ್ತು ಉತ್ತರದ ಜಿಲ್ಲೆಗಳಾದ ಬೋಗುರಾ, ಪಬ್ನಾ ಮತ್ತು ರಂಗ್‌ಪುರ, ಹಾಗೆಯೇ ಪಶ್ಚಿಮದಲ್ಲಿ ಮಗರಾ, ಪೂರ್ವದಲ್ಲಿ ಕೊಮಿಲ್ಲಾ ಮತ್ತು ದಕ್ಷಿಣದಲ್ಲಿ ಬಾರಿಸಲ್ ಮತ್ತು ಫೆನಿಯಲ್ಲಿ ಹೆಚ್ಚು ಸಾವುಗಳು ಸಂಭವಿಸಿದೆ.
ಬಾಂಗ್ಲಾದೇಶ ಪೊಲೀಸರ ಹೆಚ್ಚುವರಿ ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ ವಿಜಯ್ ಬಸಾಕ್ ಪ್ರಕಾರ, ವಾಯುವ್ಯ ನಗರದ ಸಿರಾಜ್‌ಗಂಜ್‌ನಲ್ಲಿರುವ ಎನಾಯೆತ್‌ಪುರ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಲಾಗಿದೆ. ದಾಳಿಕೋರರ ಗುರುತು ತಿಳಿದುಬಂದಿಲ್ಲ.
ಪ್ರತಿಭಟನೆ ಏಕೆ?: ಸರ್ಕಾರಿ ಉದ್ಯೋಗಗಳಲ್ಲಿ ಕೋಟಾ ಪದ್ಧತಿಯನ್ನು ತೆಗೆದುಹಾಕುವಂತೆ ವಿದ್ಯಾರ್ಥಿಗಳಿಂದ ಆರಂಭವಾದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ 200 ಜನರನ್ನು ಬಲಿತೆಗೆದುಕೊಂಡಿದ್ದು ಪ್ರತಿಭಟನಾಕಾರರು ಹಸೀನಾ ಅವರ ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ.
1971 ರಲ್ಲಿ ಪಾಕಿಸ್ತಾನದ ವಿರುದ್ಧ ಬಾಂಗ್ಲಾದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ ಯೋಧರ ಕುಟುಂಬಗಳಿಗೆ ಶೇಕಡಾ 30ರಷ್ಟು ಸರ್ಕಾರಿ ಉದ್ಯೋಗಗಳನ್ನು ಮೀಸಲಿಡುವ ಕೋಟಾ ವ್ಯವಸ್ಥೆಯನ್ನು ನಿಲ್ಲಿಸಬೇಕೆಂದು ವಿದ್ಯಾರ್ಥಿಗಳು ಒತ್ತಾಯಿಸಿ ಕಳೆದ ತಿಂಗಳು ಪ್ರತಿಭಟನೆ ಆರಂಭಿಸಿದ್ದರು.