ನವದೆಹಲಿ: ಅಬಕಾರಿ ನೀತಿ ಹಗರಣದಲ್ಲಿ ಸಿಬಿಐ ದಾಖಲಿಸಿರುವ ಭ್ರಷ್ಟಾಚಾರ ಪ್ರಕರಣದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನ್ಯಾಯಾಂಗ ಬಂಧನ ಅವಧಿಯಲ್ಲಿ ದೆಹಲಿ ನ್ಯಾಯಾಲಯ ಆಗಸ್ಟ್ 20 ರವರೆಗೆ ವಿಸ್ತರಿಸಿದೆ.
ಕೇಜ್ರಿವಾಲ್ ಅವರನ್ನು ಗುರುವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಅವರ ಕಸ್ಟಡಿಯನ್ನು ವಿಶೇಷ ನ್ಯಾಯಾಧೀಶರಾದ ಕಾವೇರಿ ಬವೇಜಾ ಅವರು ವಿಸ್ತರಿಸಿದರು. ಪ್ರಕರಣದಲ್ಲಿ ಕೇಜ್ರಿವಾಲ್ ವಿರುದ್ಧ ಸಿಬಿಐ ಸಲ್ಲಿಸಿರುವ ಪೂರಕ ಚಾರ್ಜ್ ಶೀಟ್ ನ್ನು ಆಗಸ್ಟ್ 12 ರಂದು ನ್ಯಾಯಾಲಯ ಪರಿಗಣಿಸುವ ಸಾಧ್ಯತೆಯಿದೆ.
ಪ್ರಕರಣದಲ್ಲಿ ಮುಖ್ಯ ಸಂಚುಕೋರರಲ್ಲಿ ಒಬ್ಬರೆಂದು ಅವರ ಹೆಸರಿದ್ದು,ತನಿಖೆ ಇನ್ನೂ ಪ್ರಗತಿಯಲ್ಲಿದೆ ಎಂದು ಹೇಳಿ ಜೂನ್ ನಲ್ಲಿ ಕೇಜ್ರಿವಾಲ್ ಅವರನ್ನು ನ್ಯಾಯಾಂಗ ಬಂಧನಕ್ಕೆ ನ್ಯಾಯಾಧೀಶರು ಕಳುಹಿಸಿದ್ದರು. ಕೇಜ್ರಿವಾಲ್ ಪ್ರಕರಣದ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು ಎಂಬ ಸಿಬಿಐನ ಆತಂಕವನ್ನೂ ನ್ಯಾಯಾಧೀಶರು ಪರಿಗಣಿಸಿದ್ದರು.
55 ವರ್ಷದ ಕೇಜ್ರಿವಾಲ್ ಅವರನ್ನು ಜೂನ್ 26 ರಂದು ತಿಹಾರ್ ಜೈಲಿನಿಂದ ಸಿಬಿಐ ಬಂಧಿಸಿತ್ತು. ಅಲ್ಲಿ ಅವರು ಜಾರಿ ನಿರ್ದೇಶನಾಲಯ ದಾಖಲಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದರು.
ಮಾರ್ಚ್ 21 ರಂದು ಕೇಜ್ರಿವಾಲ್ ಅವರನ್ನು ಇಡಿ ಬಂಧಿಸಿತ್ತು. ಜುಲೈ 12 ರಂದು ಇಡಿ ಪ್ರಕರಣದಲ್ಲಿ ಕೇಜ್ರಿವಾಲ್‌ಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿದ್ದರೂ, ಅವರು ಜಾಮೀನು ಬಾಂಡ್ ಒದಗಿಸದ ಕಾರಣ ಪ್ರಕರಣಕ್ಕೆ ಸಂಬಂಧಿಸಿದಂತೆ ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ.