ಕೋಲ್ಕತ್ತಾ: ಕೋಲ್ಕತ್ತಾದ ಸರ್ಕಾರಿ ಆರ್‌ಜಿ ಕರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಕೊಠಡಿಯಲ್ಲಿ ಶುಕ್ರವಾರ 31 ವರ್ಷದ ದ್ವಿತೀಯ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ, ಬಳಿಕ ಕೊಲೆ ಮಾಡಲಾಗಿದೆ.
ಪ್ರಾಥಮಿಕ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಹತ್ಯೆಗೂ ಮುನ್ನ ಲೈಂಗಿಕ ದೌರ್ಜನ್ಯ ಎಸಗಿರುವುದು ದೃಢಪಟ್ಟಿದೆ.
ಅಪರಾಧದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ. ಆ ವ್ಯಕ್ತಿ ಹೊರಗಿನ ವ್ಯಕ್ತಿಯಾಗಿದ್ದು, ಅವರು ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ಉಚಿತ ಪ್ರವೇಶ ಹೊಂದಿದ್ದರು. "ಅವರ ಚಟುವಟಿಕೆಗಳು ಸಾಕಷ್ಟು ಅನುಮಾನಾಸ್ಪದವಾಗಿದೆ ಮತ್ತು ಅವರು ನೇರವಾಗಿ ಅಪರಾಧದಲ್ಲಿ ಭಾಗಿಯಾಗಿದ್ದಾರೆಂದು ತೋರುತ್ತದೆ" ಎಂದು ಹಿರಿಯ ಅಧಿಕಾರಿ ಹೇಳಿದ್ದಾರೆ.
ಹತ್ಯೆಯಾದ ಮಹಿಳೆ ಪಲ್ಮನಾಲಜಿ ವಿಭಾಗದ ವಿದ್ಯಾರ್ಥಿನಿಯಾಗಿದ್ದು, ಮರಣೋತ್ತರ ಪರೀಕ್ಷಾ ವರದಿಯೂ ಇದು ಆತ್ಮಹತ್ಯೆಯಲ್ಲ ಎಂದು ಹೇಳಿದೆ. ಹೀಗಾಗಿ ತಾಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಶುಕ್ರವಾರ ಬೆಳಗಿನ ಜಾವ 3 ರಿಂದ 6 ಗಂಟೆಯ ನಡುವೆ ಈ ಕೃತ್ಯ ನಡೆದಿದೆ ಎಂದು ಕೋಲ್ಕತ್ತಾ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
“ಇದು ಖಂಡಿತವಾಗಿಯೂ ಆತ್ಮಹತ್ಯೆಯ ಪ್ರಕರಣವಲ್ಲ; ಲೈಂಗಿಕ ದೌರ್ಜನ್ಯದ ನಂತರ ಮಹಿಳೆಯನ್ನು ಕೊಲೆ ಮಾಡಲಾಗಿದೆ," ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಾಲ್ಕು ಪುಟಗಳ ವರದಿಯ ಪ್ರಕಾರ, ಮಹಿಳೆಯ ಖಾಸಗಿ ಭಾಗಗಳಿಂದ ರಕ್ತಸ್ರಾವವಾಗಿದೆ. ದೇಹದ ಇತರ ಭಾಗಗಳಲ್ಲಿ ಗಾಯದ ಗುರುತುಗಳಿವೆ. "ಆಕೆಯ ಕಣ್ಣು ಮತ್ತು ಬಾಯಿಯಿಂದ ರಕ್ತಸ್ರಾವವಾಗಿದೆ. ಆಕೆಯ ಮುಖ ಮತ್ತು ಉಗುರುಗಳ ಮೇಲೆ ಗಾಯವಾಗಿದೆ. ಆಕೆಯ ಹೊಟ್ಟೆ, ಎಡ ಕಾಲು, ಕುತ್ತಿಗೆ, ಬಲಗೈ, ಬೆರಳು ಮತ್ತು ತುಟಿಗಳಲ್ಲಿ ಗಾಯಗಳಾಗಿವೆ."
ಪ್ರಕರಣದ ತನಿಖೆಗಾಗಿ ಕೋಲ್ಕತ್ತಾ ಪೊಲೀಸರು ವಿಶೇಷ ತನಿಖಾ ತಂಡ(ಎಸ್‌ಐಟಿ)ವನ್ನು ರಚಿಸಿದ್ದಾರೆ.
ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯೊಳಗೆ ತನ್ನ ಮಗಳ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ ಮತ್ತು "ಸತ್ಯವನ್ನು ಮರೆಮಾಚುವ" ಪ್ರಯತ್ನಗಳು ನಡೆಯುತ್ತಿವೆ ಎಂದು ಆಕೆಯ ತಂದೆ ಆರೋಪಿಸಿದ್ದಾರೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮಹಿಳೆಯ ಪೋಷಕರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಈ ಮಧ್ಯೆ, ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪಿಜಿಟಿ ವೈದ್ಯರು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಘಟನೆ ಖಂಡಿಸಿ ತೀವ್ರ ಪ್ರತಿಭಟನೆ ನಡೆಸುತ್ತಿದ್ದು. ತುರ್ತು ಚಿಕಿತ್ಸಾ ವಿಭಾಗ ಹೊರತುಪಡಿಸಿ ಎಲ್ಲಾ ವಿಭಾಗಗಳಲ್ಲಿ ಕೆಲಸ ಸ್ಥಗಿತಗೊಳಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ ಮತ್ತು ತಪ್ಪಿತಸ್ಥರನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದ್ದಾರೆ.
ಆಕೆಯ ಸಾವಿನ ಕುರಿತು ಶೀಘ್ರ ತನಿಖೆ ನಡೆಸುವಂತೆ ಒತ್ತಾಯಿಸಿ ಹಲವು ವಿದ್ಯಾರ್ಥಿ ಸಂಘಟನೆಗಳು ರ್ಯಾಲಿಯನ್ನೂ ನಡೆಸಿವೆ. ಶಾಸಕ ಅಗ್ನಿಮಿತ್ರ ಪಾಲ್ ಸೇರಿದಂತೆ ಹಲವು ಪ್ರತಿಪಕ್ಷ ಬಿಜೆಪಿ ನಾಯಕರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ ಮತ್ತು ಮ್ಯಾಜಿಸ್ಟ್ರೇಟ್ ಮೇಲ್ವಿಚಾರಣೆಯಲ್ಲಿ ಸ್ವತಂತ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.