ನವದೆಹಲಿ: ಪಶ್ಚಿಮ ಬಂಗಾಳ, ತ್ರಿಪುರಾ ಮತ್ತು ಮೇಘಾಲಯದಲ್ಲಿ ಅಂತಾರಾಷ್ಟ್ರೀಯ ಗಡಿಯ ಮೂಲಕ ಭಾರತದೊಳಗೆ ನುಸುಳಲು ಯತ್ನಿಸುತ್ತಿದ್ದ ಹನ್ನೊಂದು ಬಾಂಗ್ಲಾದೇಶದ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಭಾನುವಾರ ತಿಳಿಸಿದೆ.
ಪಶ್ಚಿಮ ಬಂಗಾಳ ಮತ್ತು ತ್ರಿಪುರಾ ಗಡಿಯಿಂದ ತಲಾ ಇಬ್ಬರು, ಮೇಘಾಲಯ ಗಡಿಯಿಂದ ಏಳು ಬಾಂಗ್ಲಾದೇಶಿಯರನ್ನು ಬಂಧಿಸಲಾಗಿದೆ. ಬಂಧಿತರ ವಿಚಾರಣೆ ನಡೆಯುತ್ತಿದ್ದು, ಮುಂದಿನ ಕಾನೂನು ಕ್ರಮಕ್ಕಾಗಿ ರಾಜ್ಯ ಪೊಲೀಸರಿಗೆ ಹಸ್ತಾಂತರಿಸಲಾಗುವುದು ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.
ಉಭಯ ದೇಶಗಳ ನಡುವಿನ ಸಮಸ್ಯೆ ಪರಿಹರಿಸಲು, ವಿಶೇಷವಾಗಿ ಬಾಂಗ್ಲಾದೇಶದಲ್ಲಿರುವ ಭಾರತೀಯ ಪ್ರಜೆಗಳು, ಅಲ್ಪಸಂಖ್ಯಾತ ಹಿಂದೂ ಸಮುದಾಯಗಳ ಜನರ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಲು ಬಾಾಂಗ್ಲಾ ದೇಶ ಗಡಿ ಭದ್ರತಾ ಪಡೆಯೊಂದಿಗೆ BSF ನಿಯಮಿತವಾಗಿ ಸಂಪರ್ಕದಲ್ಲಿದೆ ಎಂದು ಅವರು ಹೇಳಿದರು.
ಮುಂಬರುವ ಸ್ವಾತಂತ್ರ್ಯ ದಿನಾಚರಣೆ ಹಾಗೂ ಬಾಂಗ್ಲಾದೇಶದಲ್ಲಿ ಅಸ್ಥಿರತೆ ಮುಂದುವರೆದಿರುವ ಬೆನ್ನಲ್ಲೇ 4,096 ಕಿಮೀ ಉದ್ದದ ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಭದ್ರತೆಯನ್ನು ಪರಿಶೀಲಿಸಲು ಶನಿವಾರ ಪೂರ್ವ ಕಮಾಂಡ್ ಮುಖ್ಯಸ್ಥ ಹೆಚ್ಚುವರಿ ಮಹಾನಿರ್ದೇಶಕ ರವಿ ಗಾಂಧಿ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಗಡಿಯಲ್ಲಿ ಭದ್ರತೆ ಮತ್ತು ನಿರ್ವಹಣೆಯನ್ನು ಮತ್ತಷ್ಟು ಹೆಚ್ಚಿಸಲು ವಿವರವಾದ ಚರ್ಚೆ ನಡೆಸಲಾಯಿತು. ಬಾಂಗ್ಲಾದೇಶ ಗಡಿ ಭದ್ರತಾ ಪಡೆಯೊಂದಿಗೆ ನಿಕಟ ಸಂಪರ್ಕ ಮುಂದುವರೆಸಿಕೊಂಡು ಹೋಗಲು ನಿರ್ಧರಿಸಲಾಯಿತು ಎಂದು BSF ಹೇಳಿಕೆಯಲ್ಲಿ ತಿಳಿಸಿದೆ.