ಕೋಲ್ಕತ್ತಾ: ಸರ್ಕಾರಿ ಸ್ವಾಮ್ಯದ ಆರ್‌ಜಿ ಕಾರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ ಪ್ರಕರಣ ಸಂಬಂಧ ಪ್ರಾಂಶುಪಾಲ ಸಂದೀಪ್ ಘೋಷ್ ಅವರು ಸೋಮವಾರ ಬೆಳಗ್ಗೆ ತಮ್ಮ ಹುದ್ದೆಗೆ ಮತ್ತು ಸರ್ಕಾರಿ ಸೇವೆಗೆ ರಾಜೀನಾಮೆ ನೀಡಿದ್ದಾರೆ.
ಕಿರಿಯ ವೈದ್ಯರಿಗೆ ಸೂಕ್ತ ಭದ್ರತೆ ಒದಗಿಸಲು ವಿಫಲರಾದ ಪ್ರಾಂಶುಪಾಲರನ್ನು ತೆಗೆದುಹಾಕುವಂತೆ ಒತ್ತಾಯಿಸಿ ಸಿಬ್ಬಂದಿ ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ತೀವ್ರ ಪ್ರತಿಭಟನೆ ನಡೆಸಿದ್ದರು.
ಈ ಮಧ್ಯ ಪಿಜಿ ವಿದ್ಯಾರ್ಥಿನಿಯ ಹತ್ಯೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿ ಕಿರಿಯ ವೈದ್ಯರು, ಇಂಟರ್ನ್‌ಗಳು ಮತ್ತು ಸ್ನಾತಕೋತ್ತರ ಪ್ರಶಿಕ್ಷಣಾರ್ಥಿಗಳು ಸತತ ನಾಲ್ಕನೇ ದಿನವೂ ತಮ್ಮ ಪ್ರತಿಭಟನೆ ಮುಂದುವರೆಸಿದ್ದು, ರಾಜ್ಯದಾದ್ಯಂತ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆ ಅಸ್ತವ್ಯಸ್ತಗೊಂಡಿದೆ.
ಕೋಲ್ಕತ್ತಾ ಪಶ್ಚಿಮ ಬಂಗಾಳ ಸರ್ಕಾರವು ವೈದ್ಯಕೀಯ ಅಧೀಕ್ಷಕ-ಕಮ್-ಉಪ-ಪ್ರಾಂಶುಪಾಲ ಸಂಜಯ್ ವಶಿಸ್ಟ್ ಅವರನ್ನು ವಜಾಗೊಳಿಸಿದ ಒಂದು ದಿನದ ನಂತರ ಘೋಷ್ ಅವರು ರಾಜೀನಾಮೆ ನೀಡಿದ್ದಾರೆ. ವಿದ್ಯಾರ್ಥಿ ವ್ಯವಹಾರಗಳ ಡೀನ್ ಬುಲ್ಬುಲ್ ಮುಖೋಪಾಧ್ಯಾಯ ಅವರನ್ನು ಸೂಪರಿಂಟೆಂಡೆಂಟ್ ಆಗಿ ಹೆಚ್ಚುವರಿ ಜವಾಬ್ದಾರಿಗಳೊಂದಿಗೆ ನೇಮಿಸಲಾಗಿದೆ.
ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಪ್ರಕರಣವನ್ನು ಖಂಡಿಸಿ ಕಿರಿಯ ವೈದ್ಯರು ಕಳೆದ ಮೂರು ದಿನಗಳಿಂದ ತುರ್ತು ಸೇವೆಗಳನ್ನು ಹೊರತುಪಡಿಸಿ ಇತರೆ ಎಲ್ಲಾ ಸೇವೆಯಗಳನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
"ನಮ್ಮ ಸಹೋದ್ಯೋಗಿಯ ಹತ್ಯೆಯ ಬಗ್ಗೆ ಸಿಬಿಐ ಅಥವಾ ಸಿಟ್ಟಿಂಗ್ ಮ್ಯಾಜಿಸ್ಟ್ರೇಟ್‌ನಿಂದ ನಿಷ್ಪಕ್ಷಪಾತ ತನಿಖೆಯಾಗಬೇಕು ಎಂದು ನಾವು ಬಯಸುತ್ತೇವೆ. ಪ್ರಸ್ತುತ ಪೊಲೀಸ್ ತನಿಖೆಯಿಂದ ನಾವು ಅತೃಪ್ತರಾಗಿದ್ದೇವೆ ಮತ್ತು ನ್ಯಾಯ ಸಿಗುವವರೆಗೂ ನಮ್ಮ ಪ್ರತಿಭಟನೆ ಮುಂದುವರೆಸುತ್ತೇವೆ" ಎಂದು ಘಟನೆ ನಡೆದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಕಿರಿಯ ವೈದ್ಯರೊಬ್ಬರು ಹೇಳಿದ್ದಾರೆ.
ಕಳೆದ ಶುಕ್ರವಾರ ಬೆಳಗ್ಗೆ ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ.