ಭುವನೇಶ್ವರ: ಒಡಿಶಾ ಉಪಮುಖ್ಯಮಂತ್ರಿ ಪ್ರವತಿ ಪರಿದಾ ಅವರು ರಾಜ್ಯ ಸರ್ಕಾರಿ ಮತ್ತು ಖಾಸಗಿ ವಲಯದ ಉದ್ಯೋಗಿಗಳಿಗೆ ಒಂದು ದಿನದ ವೇತನ ಸಹಿತ ಮುಟ್ಟಿನ ರಜೆಯನ್ನು ಗುರುವಾರ ಘೋಷಿಸಿದ್ದಾರೆ. ಆದಾಗ್ಯೂ, ಈ ರಜೆ ಐಚ್ಛಿಕವಾಗಿರುತ್ತದೆ ಎಂದು ಅವರು ಹೇಳಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಸ್ತುವಾರಿಯೂ ಆಗಿರುವ ಪರಿದಾ ಅವರು, ಕಟಕ್‌ನಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಈ ಘೋಷಣೆ ಮಾಡಿದ್ದಾರೆ.
ಮಹಿಳಾ ಉದ್ಯೋಗಿಗಳು ಮುಟ್ಟಾದ ಮೊದಲ ಅಥವಾ ಎರಡನೇ ದಿನದಂದು ರಜೆ ತೆಗೆದುಕೊಳ್ಳಬಹುದು. "ಇದು ಐಚ್ಛಿಕವಾಗಿರುತ್ತದೆ. ರಜೆ ತೆಗೆದುಕೊಳ್ಳುವುದು ಅವರವರ ಇಚ್ಛೆಗೆ ಬಿಡಲಾಗಿದೆ" ಎಂದು ಒಡಿಶಾ ಡಿಸಿಎಂ ತಿಳಿಸಿದ್ದಾರೆ.
ಕೀನ್ಯಾದ ನೈರೋಬಿಯಲ್ಲಿ ನಡೆದ ಯುನೈಟೆಡ್ ನೇಷನ್ಸ್ ಸಿವಿಲ್ ಸೊಸೈಟಿ ಕಾನ್ಫರೆನ್ಸ್ - 2024 ರಲ್ಲಿ ಭಾಗವಹಿಸಿದ್ದ ಒಡಿಯಾ ಹುಡುಗಿಯೊಬ್ಬಳು ಪಿರಿಯಡ್ಸ್ ಸಮಯದಲ್ಲಿ ವೈತನ ಸಹಿತ ರಜೆ ನೀಡಬೇಕು ಎಂದು ಧ್ವನಿ ಎತ್ತಿದ್ದಳು.
ಒಡಿಶಾದ ಮಹಿಳಾ ಕಾರ್ಯಕರ್ತೆ ರಂಜಿತಾ ಪ್ರಿಯದರ್ಶಿನಿ ಅವರು ಋತುಸ್ರಾವದ ಸಮಯದಲ್ಲಿ ಮಹಿಳೆಯರಿಗೆ ವೇತನ ಸಹಿತ ರಜೆ ನೀಡುವ ಬಗ್ಗೆ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಸ್ತಾಪಿಸುವ ಮೂಲಕ ಎಲ್ಲ ಪ್ರತಿನಿಧಿಗಳ ಗಮನ ಸೆಳೆದಿದ್ದರು.
ಪ್ರಪಂಚದಾದ್ಯಂತ ಮಹಿಳೆಯರು ತಮ್ಮ ಮುಟ್ಟಿನ ಸಮಯದಲ್ಲಿ ದೈಹಿಕ ನೋವಿನಿಂದ ಬಳಲುತ್ತಿದ್ದಾರೆ ಎಂದು ಅವರು ವಾದಿಸಿದ್ದರು.