ನವದೆಹಲಿ: ಕೋಲ್ಕತ್ತಾದ ಆರ್ ಜಿ ಕಾರ್ ವೈದ್ಯಕೀಯ ಕಾಲೇಜ್ ಮತ್ತು ಆಸ್ಪತ್ರೆಯಲ್ಲಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ವೈದ್ಯರು ಶನಿವಾರ ದೇಶಾದ್ಯಂತ ಪ್ರತಿಭಟನೆ ನಡೆಸಿದರು.
ಈ ಮಧ್ಯೆ ಭಾರತೀಯ ವೈದ್ಯಕೀಯ ಸಂಘ(ಐಎಂಎ) ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಸಮಸ್ಯೆ ಪರಿಹರಿಸಲು ಮಧ್ಯ ಪ್ರವೇಶಿಸಬೇಕು ಎಂದು ಮನವಿ ಮಾಡಿದೆ. ಅಲ್ಲದೆ ಆರೋಗ್ಯ ಸಿಬ್ಬಂದಿ ವಿರುದ್ಧದ ಹಿಂಸಾಚಾರವನ್ನು ತಡೆಗಟ್ಟಲು ಮತ್ತು ಕಡ್ಡಾಯ ಭದ್ರತಾ ಕ್ರಮಗೊಳಂದಿಗೆ ಆಸ್ಪತ್ರೆಗಳನ್ನು ಸುರಕ್ಷಿತ ವಲಯಗಳಾಗಿ ಘೋಷಿಸಲು ಕೇಂದ್ರ ಕಾನೂನು ಜಾರಿಗೆ ತರಬೇಕು ಎಂದು ಒತ್ತಾಯಿಸಿದೆ.
ವೈದ್ಯೆ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ದೇಶಾದ್ಯಂತ ವೈದ್ಯರು ಇಂದು ಬೆಳಗ್ಗೆ 6 ಗಂಟೆಯಿಂದ 24 ಗಂಟೆಗಳ ಕಾಲ ರಾಷ್ಟ್ರವ್ಯಾಪಿ ತುರ್ತು ಸೇವೆಗಳನ್ನು ಹೊರತುಪಡಿಸಿ ಒಪಿಡಿ ಬಂದ್ ಮಾಡಿ ಪ್ರತಿಭಟನೆ ನಡೆಸಿತು.
ಐಎಂಎ ಪ್ರಧಾನಿಗೆ ಬರೆದ ಪತ್ರದಲ್ಲಿ ಐದು ಬೇಡಿಕೆಗಳನ್ನು ಮುಂದಿಟ್ಟಿದೆ. ವೈದ್ಯರು ವಿಶೇಷವಾಗಿ ಮಹಿಳೆಯರು ವೃತ್ತಿಯ ಸ್ವರೂಪದಿಂದಾಗಿ ಹಿಂಸೆಗೆ ಗುರಿಯಾಗುತ್ತಾರೆ. ಆಸ್ಪತ್ರೆಗಳು ಮತ್ತು ಕ್ಯಾಂಪಸ್‌ಗಳ ಒಳಗೆ ವೈದ್ಯರ ಸುರಕ್ಷತೆಯನ್ನು ಒದಗಿಸುವುದು ಅಧಿಕಾರಿಗಳ ಜವಾಬ್ದಾರಿ ಎಂದು ಹೇಳಿದೆ.
ಕೆಲಸದಲ್ಲಿನ ಪರಿಸ್ಥಿತಿಗಳು ಮತ್ತು ಆಸ್ಪತ್ರೆಯಲ್ಲಿ ವೈದ್ಯರಿಗೆ ಸುರಕ್ಷಿತ ಸ್ಥಳಗಳ ಕೊರತೆಯ ವಿರುದ್ಧ ಐಎಂಎ ದೂರಿದ್ದು, ಸಮಸ್ಯೆ ಪರಿಹರಿಸಲು ಪ್ರಧಾನ ಮಂತ್ರಿಯರು ಮಧ್ಯಪ್ರವೇಶಿಸಬೇಕು ಎಂದು ಕೋರಿದೆ.
1. ಕೇಂದ್ರೀಯ ಶಾಸನವನ್ನು ಜಾರಿಗೊಳಿಸುವುದು: 1897 ರ ಸಾಂಕ್ರಾಮಿಕ ರೋಗಗಳ ಕಾಯಿದೆಗೆ 2020 ರಲ್ಲಿ ಮಾಡಲಾದ ತಿದ್ದುಪಡಿಗಳನ್ನು “ಆರೋಗ್ಯ ಸೇವೆಗಳ ಸಿಬ್ಬಂದಿ ಮತ್ತು ಕ್ಲಿನಿಕಲ್ ಸ್ಥಾಪನೆಗಳು(ಹಿಂಸಾಚಾರದ ನಿಷೇಧ ಮತ್ತು ಆಸ್ತಿ ಹಾನಿ ಮಸೂದೆ 2019) ಕರಡುಗೆ ಸೇರಿಸುವ ಕೇಂದ್ರ ಕಾಯಿದೆಯನ್ನು ಜಾರಿಗೆ ತರಲು IMA ಕರೆ ನೀಡಿದೆ. ಆರೋಗ್ಯ ಕಾರ್ಯಕರ್ತರನ್ನು ರಕ್ಷಿಸಲು ಪ್ರಸ್ತುತ ಜಾರಿಯಲ್ಲಿರುವ 25 ರಾಜ್ಯ ಕಾನೂನುಗಳನ್ನು ಇದು ಬಲಪಡಿಸುತ್ತದೆ ಎಂದು ಐಎಂಎ ಹೇಳಿದೆ.
2. ಸುಧಾರಿತ ಭದ್ರತಾ ಪ್ರೋಟೋಕಾಲ್‌ಗಳು: ಆಸ್ಪತ್ರೆಗಳಲ್ಲಿ ಭದ್ರತಾ ಪ್ರೋಟೋಕಾಲ್‌ಗಳು ವಿಮಾನ ನಿಲ್ದಾಣಗಳಲ್ಲಿ ಇರುವಂತೆ ಕಟ್ಟುನಿಟ್ಟಾಗಿರುವುದನ್ನು ಖಚಿತಪಡಿಸಿಕೊಳ್ಳಲು ಐಎಂಎ ಸರ್ಕಾರವನ್ನು ಒತ್ತಾಯಿಸಿದೆ. ಇದು ಕಡ್ಡಾಯ ಭದ್ರತಾ ಅರ್ಹತೆಗಳೊಂದಿಗೆ ಆಸ್ಪತ್ರೆಗಳನ್ನು ಸುರಕ್ಷಿತ ವಲಯಗಳಾಗಿ ಘೋಷಿಸುವುದು, ಸಿಸಿಟಿವಿ ಕ್ಯಾಮೆರಾಗಳನ್ನು ಸ್ಥಾಪಿಸುವುದು, ಭದ್ರತಾ ಸಿಬ್ಬಂದಿಯನ್ನು ನಿಯೋಜಿಸುವುದು ಮತ್ತು ಭವಿಷ್ಯದಲ್ಲಿ ಅಂತಹ ಘಟನೆಗಳನ್ನು ತಡೆಯಲು ಸ್ಪಷ್ಟ ಪ್ರೋಟೋಕಾಲ್‌ಗಳನ್ನು ಸ್ಥಾಪಿಸುವುದನ್ನು ಒಳಗೊಂಡಿರುತ್ತದೆ.
3. ಸುಧಾರಿತ ಕೆಲಸದ ಪರಿಸ್ಥಿತಿಗಳು: ವೈದ್ಯರಿಗೆ ಸುಧಾರಿತ ಕೆಲಸದ ಪರಿಸ್ಥಿತಿಗಳನ್ನು ಸಹ ಐಎಂಎ ಕೇಳಿದೆ. “ಸಂತ್ರಸ್ತರು ಇದ್ದ 36 ಗಂಟೆಗಳ ಡ್ಯೂಟಿ ಶಿಫ್ಟ್ ಮತ್ತು ವಿಶ್ರಾಂತಿ ಪಡೆಯಲು ಸುರಕ್ಷಿತ ಸ್ಥಳಗಳ ಕೊರತೆ ಮತ್ತು ಸಾಕಷ್ಟು ವಿಶ್ರಾಂತಿ ಕೊಠಡಿಗಳು, ರೆಸಿಡೆಂಟ್ ವೈದ್ಯರಿಗೆ ಅನುಕೂಲದ ಕೊರತೆಗಳು ಇವೆ” ಎಂದು ಐಎಂಎ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
4. ಕ್ಷಿಪ್ರ ತನಿಖೆ: ನ್ಯಾಯವನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಒದಗಿಸುವುದನ್ನು ಖಾತ್ರಿಪಡಿಸುವ, ಒಂದು ನಿಗದಿತ ಕಾಲಮಿತಿಯೊಳಗೆ ಅಪರಾಧದ ಬಗ್ಗೆ “ಸೂಕ್ಷ್ಮ ಮತ್ತು ವೃತ್ತಿಪರ ತನಿಖೆ” ಯನ್ನು ಐಎಂಎ ಒತ್ತಾಯಿಸಿದೆ.
5. ಸಂತ್ರಸ್ತೆಯ ಕುಟುಂಬಕ್ಕೆ ಪರಿಹಾರ: ಐಎಂಎ ಅತ್ಯಾಚಾರ ಸಂತ್ರಸ್ತೆಯ ಕುಟುಂಬಕ್ಕೆ ಪರಿಹಾರವನ್ನು ಸಹ ಕೋರಿದೆ. ಸಂತ್ರಸ್ತೆಯ ಕುಟುಂಬಕ್ಕೆ ಸೂಕ್ತ ಮತ್ತು ಗೌರವಾನ್ವಿತ ಪರಿಹಾರವನ್ನು ನೀಡಬೇಕೆಂದು ಐಎಂಎ ಹೇಳಿದೆ.