ಕೇದಾರನಾಥ: ಕಳೆದ ಜುಲೈ 31 ರ ರಾತ್ರಿ ಸುರಿದ ಭಾರೀ ಮಳೆಯಿಂದ ಉಂಟಾದ ಭೂಕುಸಿತದಿಂದ ಹಾನಿಗೊಳಗಾಗಿದ್ದ ಕೇದಾರನಾಥ ಚಾರಣ ಮಾರ್ಗ ದುರಸ್ತಿಯಾಗಿದ್ದು, ಯಾತ್ರಾರ್ಥಿಗಳಿಗೆ ಪುನಃ ತೆರೆಯಲಾಗಿದೆ.
ಬರೊಬ್ಬರಿ 15 ದಿನಗಳ ನಿರಂತರ ದುರಸ್ತಿ ಕಾಮಗಾರಿ ಪೂರ್ಣಗೊಂಡಿದ್ದು, ಯಾತ್ರಾರ್ಥಿಗಳಿಗೆ ಟ್ರೆಕಿಂಗ್ ಮಾರ್ಗವನ್ನು ಬಳಕೆಗೆ ತೆರೆಯಲಾಗಿದೆ. ಭೂಕುಸಿತದಿಂದ 29 ಸ್ಥಳಗಳಲ್ಲಿ ನಿರ್ಬಂಧಿಸಲಾಗಿದ್ದ 19 ಕಿಮೀ ಉದ್ದದ ಮಾರ್ಗವನ್ನು ಶನಿವಾರ ಪುನಃಸ್ಥಾಪಿಸಲಾಗಿದೆ ಎಂದು ಡೆಹ್ರಾಡೂನ್‌ನ ಅಧಿಕಾರಿಗಳು ತಿಳಿಸಿದ್ದಾರೆ.
ಸುಮಾರು 260 ಕಾರ್ಮಿಕರು ಹಗಲಿರುಳು ಶ್ರಮಿಸಿ ಯಾತ್ರಾರ್ಥಿಗಳಿಗೆ ಮಾರ್ಗವನ್ನು ಸರಿಪಡಿಸಿದ್ದು, ಭದ್ರತಾ ಸಿಬ್ಬಂದಿ ಯಾತ್ರಾರ್ಥಿಗಳಿಗೆ ರಸ್ತೆ ದಾಟಲು ಸಹಾಯ ಮಾಡುತ್ತಿರುವ ಒಂದೆರಡು ಸ್ಥಳಗಳನ್ನು ಹೊರತುಪಡಿಸಿ ಬಹುತೇಕ ಮಾರ್ಗವನ್ನು ಈಗ ದುರಸ್ತಿ ಮಾಡಲಾಗಿದೆ ಎಂದು ಅವರು ಹೇಳಿದರು.
ಜುಲೈ 31 ರಂದು ಭಾರೀ ಮಳೆ ಸುರಿದ ನಂತರ ಈ ಮಾರ್ಗದಲ್ಲಿ ಸರಣಿ ಭೂಕುಸಿತಗಳು ಸಂಭವಿಸಿತ್ತು. ಅಂದು ಸಾವಿರಾರು ಯಾತ್ರಾರ್ಥಿಗಳು ಸಿಲುಕಿಕೊಂಡಿದ್ದರು.
ಭಾರತೀಯ ವಾಯುಪಡೆ ಮತ್ತು ಖಾಸಗಿ ಹೆಲಿಕಾಪ್ಟರ್‌ಗಳ ನೆರವಿನಿಂದ ಭೀಮಾಲಿ ಮತ್ತು ಲಿಂಚೋಲಿ ಸೇರಿದಂತೆ ಮಾರ್ಗದುದ್ದಕ್ಕೂ ಸಿಕ್ಕಿಬಿದ್ದ 11,000 ಕ್ಕೂ ಹೆಚ್ಚು ಯಾತ್ರಾರ್ಥಿಗಳನ್ನು ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್ ಮತ್ತು ಪೊಲೀಸ್ ಸಿಬ್ಬಂದಿ ಸುಮಾರು ಒಂದು ವಾರದ ರಕ್ಷಣಾ ಕಾರ್ಯಾಚರಣೆಯಲ್ಲಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದರು.