ನವದೆಹಲಿ: ಏಮ್ಸ್‌ನ 34 ವರ್ಷದ ನ್ಯೂರೋ ಸರ್ಜನ್ ಒಬ್ಬರು ತಮ್ಮ ದಕ್ಷಿಣ ದೆಹಲಿಯ ಮನೆಯಲ್ಲಿ ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುಜರಾತ್‌ನ ರಾಜ್‌ಕೋಟ್ ನಿವಾಸಿಯಾಗಿರುವ ಡಾ. ರಾಜ್ ಘೋನಿಯಾ ಅವರು ಗೌತಮ್ ನಗರ ಪ್ರದೇಶದಲ್ಲಿನ ತಮ್ಮ ಮನೆಯಲ್ಲಿ ಔಷಧಗಳನ್ನು ಮಿತಿಮೀರಿ ಸೇವಿಸಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳದಲ್ಲಿ ಡೆತ್ ನೋಟ್ ಸಹ ವಶಪಡಿಸಿಕೊಳ್ಳಲಾಗಿದೆ. ಆದರೆ ಅದರಲ್ಲಿ ತಮ್ಮ ಸಾವಿಗೆ ಘೋನಿಯಾ ಅವರು ಯಾರನ್ನೂ ದೂರಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
"ಭಾನುವಾರ ಮಧ್ಯಾಹ್ನ 2 ಗಂಟೆಗೆ, ಗೌತಮ್ ನಗರ ಪ್ರದೇಶದಲ್ಲಿ ವೈದ್ಯರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಹೌಜ್ ಖಾಸ್ ಪೊಲೀಸ್ ಠಾಣೆಗೆ ಪಿಸಿಆರ್ ಕರೆ ಬಂದಿತು. ಪೊಲೀಸರು ಸ್ಥಳಕ್ಕೆ ತೆರಳಿದಾಗ ಘೋನಿಯಾ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘೋನಿಯಾ ಅವರನ್ನು ತಕ್ಷಣ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್(ಎಐಐಎಂಎಸ್)ಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದರು.
ಡಾ. ರಾಜ್ ಘೋನಿಯಾ ಅವರು ಏಮ್ಸ್‌ನ ಟ್ರಾಮಾ ಸೆಂಟರ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು.