ನವದೆಹಲಿ: ಕೋಲ್ಕತ್ತಾದ ವೈದ್ಯ ವಿದ್ಯಾರ್ಥಿನಿ ಮೇಲಿನ ಹತ್ಯಾಚಾರ ಪ್ರಕರಣ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಇತ್ತ ನಿರ್ಭಯಾ ತಾಯಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವಿರುದ್ಧ ಕಿಡಿಕಾರಿದ್ದು, ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
2012ರ ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ನಿರ್ಭಯಾ ಅವರ ತಾಯಿ ಆಶಾದೇವಿ ಕೋಲ್ಕತಾ ಪ್ರಕರಣದ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ್ದು, 'ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ. ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
'ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ಅಧಿಕಾರವನ್ನು ಬಳಸಿಕೊಂಡು ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವ ಬದಲು ಪ್ರತಿಭಟನೆ ನಡೆಸುವ ಮೂಲಕ ಜನರ ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ತಮ್ಮ ಅಧಿಕಾರವನ್ನು ಬಳಸಿಕೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಬದಲು, ಮಮತಾ ಅವರು ಸಾರ್ವಜನಿಕರನ್ನು ತಪ್ಪುದಾರಿಗೆ ಎಳೆಯಲು ಪ್ರಯತ್ನಿಸುತ್ತಿದ್ದಾರೆ.
ಈ ಪ್ರಕರಣದಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಮಮತಾ ಅವರು ಪ್ರತಿಭಟನೆ ನಡೆಸುತ್ತಿದ್ದಾರೆ, ಅವರು ಸ್ವತಃ ಮಹಿಳೆ. ರಾಜ್ಯದ ಮುಖ್ಯಮಂತ್ರಿಯಾಗಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ನ್ಯಾಯಾಲಯಗಳು ಅತ್ಯಾಚಾರಿಗಳನ್ನು ಶೀಘ್ರ ಶಿಕ್ಷೆಗೆ ಗುರಿಪಡಿಸುವವರೆಗೆ ಇಂತಹ ಕ್ರೌರ್ಯಗಳು ದೇಶದ ವಿವಿಧ ಭಾಗಗಳಲ್ಲಿ ಪ್ರತಿದಿನ ನಡೆಯುತ್ತಲೇ ಇರುತ್ತವೆ ಎಂದು ಆಶಾದೇವಿ ಹೇಳಿದ್ದಾರೆ.
ಕೋಲ್ಕತ್ತಾದ ವೈದ್ಯಕೀಯ ಕಾಲೇಜಿನಲ್ಲೇ ಹೆಣ್ಣುಮಕ್ಕಳು ಸುರಕ್ಷಿತವಾಗಿಲ್ಲ, ಅವರ ವಿರುದ್ಧ ಇಂತಹ ಅಮಾನುಷ ಕೃತ್ಯಗಳು ನಡೆಯುತ್ತಿವೆ ಎಂದರೆ, ದೇಶದಲ್ಲಿ ಮಹಿಳೆಯರ ಸುರಕ್ಷತೆಯ ಸ್ಥಿತಿ ಹೇಗಿದೆ ಎಂಬುದನ್ನು ಯಾರು ಬೇಕಾದರೂ ಅರ್ಥಮಾಡಿಕೊಳ್ಳಬಹುದು ಎಂದೂ ಹೇಳಿದ್ದಾರೆ.
ಆಗಸ್ಟ್ 9ರಂದು ಕೋಲ್ಕತ್ತದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 31 ವರ್ಷದ ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿತ್ತು. ಈ ಘಟನೆ ಖಂಡಿಸಿ ದೇಶದಾದ್ಯಂತ ವೈದ್ಯರು ವ್ಯಾಪಕ ಪ್ರತಿಭಟನೆ ನಡೆಸುತ್ತಿದ್ದಾರೆ.