ನವದೆಹಲಿ: ಕೋಲ್ಕತ್ತದ ಸರ್ಕಾರಿ ಆರ್. ಜಿ. ಕರ್ ಆಸ್ಪತ್ರೆಯ ಮಹಿಳಾ ಟ್ರೈನಿ ಡಾಕ್ಟರ್ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಸ್ವಯಂ ಪ್ರೇರಿತವಾಗಿ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ನಿರ್ಧರಿಸಿದೆ.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ನ್ಯಾಯ ಪೀಠ ಮಂಗಳವಾರ ವಿಚಾರಣೆ ನಡೆಸಲಿದೆ ಎಂದು ಅಪೆಕ್ಸ್ ಕೋರ್ಟ್ ವೆಬ್ ಸೈಟ್ ನಲ್ಲಿ ಮಾಹಿತಿ ನೀಡಲಾಗಿದೆ.
ಆಗಸ್ಟ್ 9 ರಂದು ಕೋಲ್ಕತ್ತದ ಸರ್ಕಾರಿ ಆರ್. ಜಿ. ಕರ್ ಆಸ್ಪತ್ರೆಯಲ್ಲಿ ಮಹಿಳಾ ಟ್ರೈನಿ ಡಾಕ್ಟರ್ ಮೇಲೆ ಅತ್ಯಾಚಾರ ಎಸಗಿ, ಆಕೆಯನ್ನು ಕೊಲೆ ಮಾಡಲಾಗಿತ್ತು. ಇತ್ತೀಚಿಗೆ ಈ ಪ್ರಕರಣದ ತನಿಖೆಯನ್ನು ಕೋಲ್ಕತ್ತ ಪೊಲೀಸರಿಂದ ಸಿಬಿಐಗೆ ಕೋಲ್ಕತ್ತಾ ಹೈಕೋರ್ಟ್ ವರ್ಗಾಯಿಸಿತ್ತು.
ಸರ್ಕಾರಿ ಆಸ್ಪತ್ರೆಯ ಸೆಮಿನಾರ್ ಹಾಲ್ ನಲ್ಲಿ ನಡೆದ ಕಿರಿಯ ಡಾಕ್ಟರ್ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ದೇಶಾದ್ಯಂತ ಆಕ್ರೋಶ ಹಾಗೂ ಪ್ರತಿಭಟನೆಗೆ ಕಾರಣವಾಗಿದೆ.