ಡೆಹ್ರಾಡೂನ್: ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಇಬ್ಬರು ಬಸ್ ಚಾಲಕರು ಸೇರಿದಂತೆ ಐವರನ್ನು ಉತ್ತರಾಖಂಡ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಡೆಹ್ರಾಡೂನ್‌ನ ಐಎಸ್‌ಬಿಟಿ ಬಸ್ ನಿಲ್ದಾಣದಲ್ಲಿ ನಿಂತಿದ್ದ ಬಸ್‌ನಲ್ಲಿ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು. ಒಂದು ತಿಂಗಳ ಅವಧಿಯಲ್ಲಿ ರಾಜ್ಯದಲ್ಲಿ ನಡೆದ ಮೂರನೇ ಅತ್ಯಾಚಾರ ಪ್ರಕರಣ ಇದಾಗಿದೆ.
ಮಕ್ಕಳ ಕಲ್ಯಾಣ ಸಮಿತಿ ತಂಡ ಅಪ್ರಾಪ್ತ ಬಾಲಕಿಯನ್ನು ಬಸ್ ನಿಲ್ದಾಣದಿಂದ ರಕ್ಷಿಸಿದ್ದು, ಘಟನೆಯನ್ನು ಬಯಲಿಗೆಳೆದಿದೆ.
"ಬಸ್ ಸಿಬ್ಬಂದಿ ಅಪ್ರಾಪ್ತ ಬಾಲಕಿಯನ್ನು ದೆಹಲಿಯಿಂದ ಡೆಹ್ರಾಡೂನ್‌ಗೆ ಕರೆತಂದಿದ್ದರು. ಇಬ್ಬರು ಬಸ್ ಚಾಲಕರು, ಕಂಡಕ್ಟರ್, ಕ್ಯಾಷಿಯರ್ ಮತ್ತು ಸ್ವೀಪರ್ ಸೇರಿದಂತೆ ಐವರು ಅದೇ ಬಸ್‌ನಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಡೆಹ್ರಾಡೂನ್ ಎಸ್‌ಎಸ್‌ಪಿ ಅಜಯ್ ಸಿಂಗ್ ಅವರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.
ಎಲ್ಲಾ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಸಂಬಂಧ ಮಕ್ಕಳ ಕಲ್ಯಾಣ ಸಮಿತಿಯು ಶನಿವಾರ ಐಎಸ್‌ಬಿಟಿ ಪೊಲೀಸ್ ಹೊರಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ಈ ಬಗ್ಗೆ ತನಿಖೆ ನಡೆಸಲು ಕ್ಷಿಪ್ರ ಕ್ರಮ ಕೈಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಸತತ ಮೂರು ಸಲ ಸಮಾಲೋಚನೆ ನಡೆಸಿದ ಬಳಿಕ ಬಾಲಕಿ ಉತ್ತರ ಪ್ರದೇಶದ ಮೊರಾದಾಬಾದ್ ಮೂಲದವಳು ಎಂದು ತಿಳಿದುಬಂದಿದೆ.
ಪೊಲೀಸ್ ಮೂಲಗಳ ಪ್ರಕಾರ, ಮೊರಾದಾಬಾದ್‌ನ 16 ವರ್ಷದ ಬಾಲಕಿ ಮೇಲೆ ಆಗಸ್ಟ್ 13 ರ ಸಂಜೆ ಡೆಹ್ರಾಡೂನ್ ISBT ಬಸ್ ನಿಲ್ದಾಣದಲ್ಲಿ ನಿಂತಿದ್ದ ಬಸ್ಸಿನಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಲಾಯಿತು. ಬಾಲಕಿ ಪಂಜಾಬ್‌ನಿಂದ ದೆಹಲಿಗೆ ಮತ್ತು ನಂತರ ಡೆಹ್ರಾಡೂನ್‌ಗೆ ಪ್ರಯಾಣ ಬೆಳೆಸಿದ್ದಳು.