ನವದೆಹಲಿ: ಏಮ್ಸ್ ಸೇರಿದಂತೆ ಎಲ್ಲಾ ಕೇಂದ್ರ ಸರ್ಕಾರಿ ಆಸ್ಪತ್ರೆಗಳು ಮತ್ತು ವೈದ್ಯಕೀಯ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುವ ಮಹಿಳಾ ಆರೋಗ್ಯ ಸಿಬ್ಬಂದಿಗೆ ಹೆಚ್ಚಿನ ಭದ್ರತೆ ನೀಡಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ತನ್ನ ಪತ್ರದಲ್ಲಿ ತಿಳಿಸಿದೆ.
ರಾತ್ರಿ ವೇಳೆ ಮಹಿಳಾ ಸಿಬ್ಬಂದಿಯ ಪ್ರಯಾಣಕ್ಕಾಗಿ ಸೂಕ್ತ ಸುರಕ್ಷಿತ ಸಾರಿಗೆಯನ್ನು ಸಹ ಒದಗಿಸಲಾಗುತ್ತದೆ. ಇದಲ್ಲದೆ, ರಾತ್ರಿ ಪಾಳಿಯಲ್ಲಿ ಒಂದಕ್ಕಿಂತ ಹೆಚ್ಚು ಮಹಿಳಾ ಆರೋಗ್ಯ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಮತ್ತು ಆಸ್ಪತ್ರೆಯ ಆವರಣದಲ್ಲಿ, ವಿಶೇಷವಾಗಿ ಮಹಿಳಾ ಆರೋಗ್ಯ ಸಿಬ್ಬಂದಿ ಕೆಲಸ ಮಾಡುವ ಸ್ಥಳಗಳಲ್ಲಿ ಸಾಕಷ್ಟು ಬೆಳಕನ್ನು ಒದಗಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಆಗಸ್ಟ್ 9 ರಂದು ಕೋಲ್ಕತ್ತಾದ ಸರ್ಕಾರಿ ಆಸ್ಪತ್ರೆಯಲ್ಲಿ 31 ವರ್ಷದ ಮಹಿಳಾ ಟ್ರೈನಿ ವೈದ್ಯೆಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ ಘಟನೆಗೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ.
ಆಗಸ್ಟ್ 19 ರಂದು ಕೇಂದ್ರ ಸರ್ಕಾರಿ ಆಸ್ಪತ್ರೆಗಳಿಗೆ ಆರೋಗ್ಯ ಸಚಿವಾಲಯ ಪತ್ರ ಬರೆದಿದ್ದು, ಮಹಿಳಾ ಆರೋಗ್ಯ ಸಿಬ್ಬಂದಿಗೆ ಮೂಲ ಸೌಕರ್ಯಗಳೊಂದಿಗೆ ಸುಭದ್ರ ಡ್ಯೂಟಿ ಕೊಠಡಿಗಳನ್ನು ಒದಗಿಸಬೇಕು, ಆಸ್ಪತ್ರೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು, ಸಾಕಷ್ಟು ಸಂಖ್ಯೆಯ ತರಬೇತಿ ಪಡೆದ ಭದ್ರತಾ ಸಿಬ್ಬಂದಿಯನ್ನು ನೇಮಿಸಬೇಕು ಎಂದು ಸೂಚಿಸಲಾಗಿದೆ.
ತರಬೇತಿ ಪಡೆದ ಭದ್ರತಾ ಸಿಬ್ಬಂದಿಯು, ಆಸ್ಪತ್ರೆಯ ಸಿಬ್ಬಂದಿ, ರೋಗಿಗಳು ಮತ್ತು ಸಂದರ್ಶಕರ ಪ್ರವೇಶ ಮತ್ತು ನಿರ್ಗಮನವನ್ನು ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡಬೇಕು. ಭದ್ರತಾ ಬೆದರಿಕೆಗಳನ್ನು ಗುರುತಿಸಲು ಮತ್ತು ಪ್ರತಿಕ್ರಿಯಿಸಲು ವೈದ್ಯರು, ದಾದಿಯರು ಮತ್ತು ಆಡಳಿತ ಸಿಬ್ಬಂದಿ ಸೇರಿದಂತೆ ಎಲ್ಲಾ ಆಸ್ಪತ್ರೆ ಉದ್ಯೋಗಿಗಳಿಗೆ ತರಬೇತಿ ನೀಡಬೇಕು. ಕ್ಯಾಂಪಸ್‌ನಲ್ಲಿ ಡಾರ್ಕ್ ಸ್ಪಾಟ್‌ಗಳನ್ನು ಮ್ಯಾಪ್ ಮಾಡಲು ಮತ್ತು ಆವರಣದಲ್ಲಿ, ವಿಶೇಷವಾಗಿ ಮಹಿಳಾ ಆರೋಗ್ಯ ಸಿಬ್ಬಂದಿಯ ಕರ್ತವ್ಯ ಪ್ರದೇಶಗಳಲ್ಲಿ, ಪಾರ್ಕಿಂಗ್ ಸ್ಥಳಗಳು, ಪ್ರವೇಶ ದ್ವಾರಗಳು ಇತ್ಯಾದಿಗಳಲ್ಲಿ ಸಾಕಷ್ಟು ಬೆಳಕು ಇರುವಂತೆ ಖಚಿತಪಡಿಸಿಕೊಳ್ಳಬೇಕು ಎಂದು ಆರೋಗ್ಯ ಸಚಿವಾಲಯ ಸೂಚಿಸಿದೆ.