ನವದೆಹಲಿ: ಅಕ್ಟೋಬರ್ 1 ರಂದು ಬಿಷ್ಣೋಯ್ ಸಮುದಾಯದ ಶತಮಾನಗಳಷ್ಟು ಹಳೆಯದಾದ ಅಸೋಜ್ ಅಮವಾಸ್ಯೆ ಹಬ್ಬ ಇರುವ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗ, ಹರಿಯಾಣ ವಿಧಾನಸಭಾ ಚುನಾವಣೆಯನ್ನು ಅಕ್ಟೋಬರ್ 5ಕ್ಕೆ ಮುಂದೂಡಿದೆ.
ಈ ಮಧ್ಯೆ ಜಮ್ಮು ಮತ್ತು ಕಾಶ್ಮೀರ ಚುನಾವಣೆಯ ಮೂರನೇ ಹಂತದ ಮತದಾನದ ದಿನಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ. ಎಂದಿನಂತೆ ಅಕ್ಟೋಬರ್ 1 ರಂದು ನಡೆಯಲಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ.
ಹರಿಯಾಣ ಮತ್ತು ಜಮ್ಮು ಮತ್ತು ಕಾಶ್ಮೀರ ಎರಡೂ ಚುನಾವಣಾ ಫಲಿತಾಂಶಗಳನ್ನು ಅಕ್ಟೋಬರ್ 8 ರಂದು ಪ್ರಕಟಿಸಲಾಗುವುದು ಎಂದು ಆಯೋಗ ತಿಳಿಸಿದೆ.
ಅಧಿಸೂಚನೆಯಲ್ಲಿ, ಬಿಷ್ಣೋಯ್ ಸಮುದಾಯದ ಹಬ್ಬದ ಸಾಂಸ್ಕೃತಿಕ ಮಹತ್ವವನ್ನು ಗೌರವಿಸಲು ಹರಿಯಾಣ ವಿಧಾನಸಭೆಯ ಚುನಾವಣೆಯನ್ನು ಅಕ್ಟೋಬರ್ 1 ರ ಬದಲು ಅಕ್ಟೋಬರ್ 5 ರಂದು ನಡೆಸಲಾಗುವುದು ಎಂದು ಚುನಾವಣಾ ಸಮಿತಿ ತಿಳಿಸಿದೆ.
ಈ ಹಿಂದೆಯೂ ಆಯೋಗವು ವಿವಿಧ ಸಮುದಾಯಗಳ ಭಾವನೆಗಳನ್ನು ಗೌರವಿಸಲು ಚುನಾವಣಾ ದಿನಾಂಕಗಳನ್ನು ಬದಲಾಯಿಸಿದೆ. ಉದಾಹರಣೆಗೆ, 2022 ರಲ್ಲಿ ಪಂಜಾಬ್ ಅಸೆಂಬ್ಲಿ ಚುನಾವಣೆಯ ಸಮಯದಲ್ಲಿ, ಗುರು ರವಿದಾಸ್ ಜಯಂತಿಗೆ ವಾರಣಾಸಿಗೆ ಪ್ರಯಾಣಿಸುವ ಭಕ್ತರಿಗೆ ಅವಕಾಶ ಕಲ್ಪಿಸಲು ಆಯೋಗವು ಚುನಾವಣೆಯನ್ನು ಒಂದು ವಾರ ಮುಂದೂಡಿತ್ತು. ಅದೇ ರೀತಿ, ಮಣಿಪುರದಲ್ಲಿ 2022 ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ, ಆಯೋಗವು ಕ್ರಿಶ್ಚಿಯನ್ ಸಮುದಾಯದ ಭಾನುವಾರದ ಪ್ರಾರ್ಥನೆಗಳನ್ನು ಗೌರವಿಸಲು ಮತದಾನದ ದಿನಾಂಕಗಳನ್ನು ಬದಲಾಯಿಸಿತ್ತು.