ಮುಂಬೈ: ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯ ಹೆಸರನ್ನು ಅಂತಿಮಗೊಳಿಸಲಾಗಿದ್ದು, ಪಕ್ಷದ ಹಿರಿಯ ನಾಯಕತ್ವದಿಂದ ದೃಢೀಕರಣಕ್ಕಾಗಿ ಕಾಯಲಾಗುತ್ತಿದೆ ಎಂದು ಭಾರತೀಯ ಜನತಾ ಪಕ್ಷದ ನಾಯಕ ರಾವ್ಸಾಹೇಬ್ ದಾನ್ವೆ ಭಾನುವಾರ ಹೇಳಿದ್ದಾರೆ.
ಮುಂದಿನ ಸಿಎಂ ಯಾರೆಂಬುದು ಮಹಾರಾಷ್ಟ್ರದ ಜನತೆಗೆ ಗೊತ್ತಿದೆ ಎಂದು ಕೇಂದ್ರದ ಮಾಜಿ ಸಚಿವರಾದ ದಾನ್ವೆ ಹೆಸರನ್ನು ಹೇಳದೆ ಕುತೂಹಲ ಇರಿಸಿಕೊಂಡಿದ್ದಾರೆ.
ಮಹಾರಾಷ್ಟ್ರದ ನೂತನ ಮಹಾಯುತಿ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭವು ಡಿಸೆಂಬರ್ 5 ರಂದು ದಕ್ಷಿಣ ಮುಂಬೈನ ಆಜಾದ್ ಮೈದಾನದಲ್ಲಿ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಳ್ಳಲಿದ್ದಾರೆ ಎಂದು ರಾಜ್ಯ ಬಿಜೆಪಿ ಮುಖ್ಯಸ್ಥ ಚಂದ್ರಶೇಖರ ಬಾವಂಕುಲೆ ನಿನ್ನೆ ತಿಳಿಸಿದ್ದರು.
ಮುಖ್ಯಮಂತ್ರಿ ಯಾರೆಂಬುದರ ಬಗ್ಗೆ ಇನ್ನೂ ಯಾವುದೇ ಘೋಷಣೆಯಾಗದಿದ್ದರೂ, ಕಳೆದ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಮತ್ತು ಉಪ ಮುಖ್ಯಮಂತ್ರಿಯಾಗಿದ್ದ ದೇವೇಂದ್ರ ಫಡ್ನವೀಸ್ ಅವರು ಈ ಹುದ್ದೆಗೆ ಮುಂಚೂಣಿಯಲ್ಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಜ್ವರದಿಂದ ಬಳಲುತ್ತಿರುವ ಮಹಾರಾಷ್ಟ್ರದ ನಿಯೋಜಿತ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಮೊನ್ನೆ ಸತಾರಾ ಜಿಲ್ಲೆಯ ತಮ್ಮ ಸ್ವಗ್ರಾಮ ಡೇರ್‌ಗೆ ತೆರಳಿದ್ದು ಇಂದು ಮುಂಬೈಗೆ ಆಗಮಿಸಲಿದ್ದಾರೆ.