ಮುಂಬೈ: ಮಹಾರಾಷ್ಟ್ರದ ನೂತನ ಸರ್ಕಾರದ ಖಾತೆ ಹಂಚಿಕೆ ಕುರಿತು ಮಾತುಕತೆ ಪ್ರಗತಿಯಲ್ಲಿದ್ದು, ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಬಿಜೆಪಿಯಿಂದ ಗೃಹ ಇಲಾಖೆಯನ್ನು ಕೋರಿದ್ದಾರೆ ಎಂದು ಶಿವಸೇನಾ ಶಾಸಕ ಭರತ್ ಗೋಗಾವಾಲೆ ಶುಕ್ರವಾರ ಹೇಳಿದ್ದಾರೆ.
ರಾಜ್ಯ ವಿಧಾನಸಭೆಯ ಚಳಿಗಾಲದ ಅಧಿವೇಶನಕ್ಕೆ ಮುನ್ನ ಡಿಸೆಂಬರ್ 11 ಮತ್ತು 16 ರ ನಡುವೆ ಸಂಪುಟ ವಿಸ್ತರಣೆಯಾಗುವ ಸಾಧ್ಯತೆಯಿದೆ ಎಂದು ಶಿವಸೇನೆಯ ಮುಖ್ಯಸ್ಥರಾದ ಶಿಂಧೆ ಅವರ ಆಪ್ತರಾಗಿರುವ ಗೋಗಾವಲೆ ಹೇಳಿದ್ದಾರೆ.
ಡಿಸೆಂಬರ್ 16 ರಿಂದ ರಾಜ್ಯದ ಎರಡನೇ ರಾಜಧಾನಿ ನಾಗ್ಪುರದಲ್ಲಿ ವಿಧಾನಮಂಡಲದ ಚಳಿಗಾಲದ ಅಧಿವೇಶನ ಆರಂಭವಾಗಲಿದೆ.
ಈ ಹಿಂದೆ ಶಿಂಧೆ ನೇತೃತ್ವದ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ದೇವೇಂದ್ರ ಫಡ್ನವಿಸ್ ಗೃಹ ಖಾತೆಯನ್ನು ನಿರ್ವಹಿಸಿದ್ದರು. ಏಕನಾಥ್ ಶಿಂಧೆ ಗೃಹ ಇಲಾಖೆಗೆ ಬೇಡಿಕೆ ಇಟ್ಟಿದ್ದಾರೆ. ಖಾತೆ ಹಂಚಿಕೆ ಕುರಿತ ಮಾತುಕತೆ ಪ್ರಗತಿಯಲ್ಲಿದೆ ಎಂದು ಗೋಗಾವಲೆ ತಿಳಿಸಿದ್ದಾರೆ.
ಯಾರಿಗೆ ಬೇಡಿಕೆ ಸಲ್ಲಿಸಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬಹುಶಃ ಪ್ರಧಾನಿ ನರೇಂದ್ರ ಮೋದಿ ಅಥವಾ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬಳಿ ಬೇಡಿಕೆ ಇಡಲಾಗಿದೆ. ಹಿಂದಿನ ಮಹಾಯುತಿ ಸರ್ಕಾರದಲ್ಲಿ ಶಿವಸೇನೆ ಹೊಂದಿದ್ದ ಖಾತೆಗಳನ್ನು ಬದಲಾಯಿಸಲು ಪ್ರಯತ್ನಿಸಲಾಗುತ್ತಿದೆ. ಮುಂದಿನ ಎರಡು ದಿನಗಳಲ್ಲಿ ಖಾತೆ ಹಂಚಿಕೆಯ ಮಾತುಕತೆ ಮುಗಿಯಲಿದೆ ಎಂದು ರಾಯಗಡ ಜಿಲ್ಲೆಯ ಮಹಾಡ್‌ನ ಶಾಸಕರಾಗಿರುವ ಗೋಗಾವಲ್ ಹೇಳಿದರು.