ಕೋಲ್ಕತ್ತಾ: ಇಂಡಿಯಾ ಬ್ಲಾಕ್‌ನ ಕಾರ್ಯವೈಖರಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಅವಕಾಶ ಸಿಕ್ಕರೆ ಪ್ರತಿಪಕ್ಷಗಳ ಮೈತ್ರಿಕೂಟ ಮುನ್ನಡೆಸಲು ಸಿದ್ಧ ಎಂದು ಹೇಳಿದ್ದಾರೆ.
ತೃಣಮೂಲ ಕಾಂಗ್ರೆಸ್(ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯ ಜವಾಬ್ದಾರಿಯ ಜೊತೆಗೆ ಇಂಡಿಯಾ ಮೈತ್ರಿಕೂಟವನ್ನು ಮುನ್ನಡೆಸುವ ಜವಾಬ್ದಾರಿಯನ್ನು ನಿರ್ವಹಿಸಬಹುದು ಎಂದು ತಿಳಿಸಿದ್ದಾರೆ.
"ನಾನು ಇಂಡಿಯಾ ಬ್ಲಾಕ್ ರಚಿಸಿದ್ದೇನೆ. ಈಗ ಅದನ್ನು ನಿರ್ವಹಿಸುವುದು ಮುನ್ನಡೆಸುವವರಿಗೆ ಬಿಟ್ಟದ್ದು. ಅವರು ಸರಿಯಾಗಿ ನಿರ್ವಹಿಸಲು ಸಾಧ್ಯವಾಗದಿದ್ದರೆ, ನಾನು ಏನು ಮಾಡಬೇಕು? ನಾನು ಹೇಳುತ್ತೇನೆ, ಎಲ್ಲರನ್ನೂ ಜೊತೆಯಲ್ಲಿ ಕರೆದುಕೊಂಡು ಹೊಗಬೇಕು" ಎಂದು ಶುಕ್ರವಾರ ಬಂಗಾಳಿ ಸುದ್ದಿ ವಾಹಿನಿ ನ್ಯೂಸ್ 18 ಬಾಂಗ್ಲಾಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಪ್ರಬಲವಾದ ಬಿಜೆಪಿ ವಿರೋಧಿ ಶಕ್ತಿಯಾಗಿರುವ ನೀವು ಇಂಡಿಯಾ ಬಣವನ್ನು ಏಕೆ ಮುನ್ನಡೆಸುತ್ತಿಲ್ಲ? ಎಂಬ ಪ್ರಶ್ನೆಗೆ, "ಅವಕಾಶ ನೀಡಿದರೆ ನಾನು ಅದರ ಸುಗಮ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳುತ್ತೇನೆ. ನಾನು ಪಶ್ಚಿಮ ಬಂಗಾಳದಿಂದ ಹೊರಗೆ ಹೋಗಲು ಬಯಸುವುದಿಲ್ಲ. ಆದರೆ ನಾನು ಇಲ್ಲಿಂದಲೇ ಮೈತ್ರಿಕೂಟವನ್ನು ಮುನ್ನಡೆಸಬಹುದು" ಎಂದು ದೀದಿ ತಿಳಿಸಿದ್ದಾರೆ.
ಬಿಜೆಪಿಯನ್ನು ಎದುರಿಸಲು ರಚಿಸಲಾದ ಇಂಡಿಯಾ ಬಣವು ಎರಡು ಡಜನ್‌ಗಿಂತಲೂ ಹೆಚ್ಚು ವಿರೋಧ ಪಕ್ಷಗಳನ್ನು ಒಳಗೊಂಡಿದೆ. ಆದಾಗ್ಯೂ, ಆಂತರಿಕ ಭಿನ್ನಾಭಿಪ್ರಾಯಗಳು ಮತ್ತು ಸಮನ್ವಯದ ಕೊರತೆಯಿಂದ ತೀವ್ರ ಟೀಕೆಗೆ ಗುರಿಯಾಗಿದೆ.
ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ತಮ್ಮ ಅಹಂಗಳನ್ನು ಬದಿಗಿಟ್ಟು ಮಮತಾ ಬ್ಯಾನರ್ಜಿ ಅವರನ್ನು ವಿರೋಧ ಪಕ್ಷದ ನಾಯಕಿಯಾಗಿ ಗುರುತಿಸುವಂತೆ ಕಾಂಗ್ರೆಸ್ ಮತ್ತು ಇತರ ಇಂಡಿಯಾ ಬ್ಲಾಕ್ ಮಿತ್ರಪಕ್ಷಗಳಿಗೆ ಕರೆ ನೀಡಿದ ಕೆಲವು ದಿನಗಳ ನಂತರ ದೀದಿ ಈ ಹೇಳಿಕೆ ನೀಡಿದ್ದಾರೆ.